ಸಂಜಯ ದತ್ಗೆ ಪೆರೋಲ್: ಜೈಲು ಅಧಿಕಾರಿಗಳ ವಿರುದ್ಧ 'ಹೈ' ಕಿಡಿ

ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಪೆರೋಲ್ ನೀಡಿರುವುದನ್ನು ಪ್ರಶ್ನಿಸಿರುವ ಬಾಂಬೆ ಹೈಕೋರ್ಟ್ ಜೈಲು ಅಧಿಕಾರಿಗಳ ವಿರುದ್ಧ ಕಿಡಿಕಾರಿದೆ.
ಸಂಜಯ ದತ್ ಅವರಿಗೆ ಪೆರೋಲ್ ನೀಡಿರುವ ಜೈಲು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಜೈಲು ಅಧಿಕಾರಿಗಳ ಕ್ರಮವನ್ನು ಟೀಕಿಸಿದೆ. 'ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದ ಅಪರಾಧಿಯಾಗಿರುವ ಸಂಜಯ್ ದತ್ ಅವರಿಗೆ ಯಾವ ಆಧಾರದ ಮೇಲೆ ಪೆರೋಲ್ ರಜೆ ನೀಡಿದ್ದೀರಿ..? ಅಲ್ಲದೆ ಪದೇ ಪದೇ ಪೆರೋಲ್ ಅನ್ನು ವಿಸ್ತರಿಸಿದ್ದೇಕೆ..? ಕಾನೂನಿನ ನಿಯಮ ಮತ್ತು ನಿಬಂಧನೆಗಳಿಗೆ ಗೌರವವೇ ಇಲ್ಲವೇ ಎಂದು ಹೈಕೋರ್ಟ್ ಕಿಡಿಕಾರಿದೆ.
'ಅಪರಾಧಿಯಾಗಿರುವ ಸಂಜಯ ದತ್ ಪೆರೋಲ್ ಮೇಲೆ 105 ದಿನಗಳ ಕಾಲ ಜೈಲಿನಿಂದ ಹೊರಗಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿಫಲತೆ ಎದ್ದು ಕಾಣುತ್ತಿದ್ದು, ಯಾವುದೋ ಮುಲಾಜಿಗೆ ಒಳಗಾಗಿ ಗೃಹ ಇಲಾಖೆ ದತ್ ಅವರ ಪೆರೋಲ್ ರಜೆಯನ್ನು ವಿಸ್ತರಿಸಿರುವುದು ಸರಿಯಲ್ಲ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಸಂಜಯ್ ದತ್ಗೆ ಸುಪ್ರೀಂಕೋರ್ಟ್ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ವಿಚಾರಣೆ ಸಂದರ್ಭದಲ್ಲಿ ದತ್ 18 ತಿಂಗಳ ಸೆರೆವಾಸ ಅನುಭವಿಸಿದ್ದು, ಇನ್ನುಳಿದ 3.5 ವರ್ಷ ಸೆರೆವಾಸ ಅನುಭವಿಸುವಂತೆ ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.
ಡಿಸೆಂಬರ್ 21ರಂದು ಪೆರೋಲ್ ಮೇಲೆ ತೆರಳಿದ್ದ ಸಂಜಯ್ ದತ್ಗೆ ಮತ್ತೆ ಫೆಬ್ರವರಿ 21ರವರೆಗೆ ಪೆರೋಲ್ ರಜೆ ವಿಸ್ತರಣೆಯಾಯಿತು. ನಂತರ ತಮ್ಮ ಪತ್ನಿ ಮಾನ್ಯತೆ ಅವರಿಗೆ ಆರೋಗ್ಯ ಸರಿಯಿಲ್ಲ ಎನ್ನುವ ನೆಪ ನೀಡಿದ ಸಂಜಯದತ್ ಪೆರೋಲ್ ರಜೆಯನ್ನು ಮತ್ತೆ ಮಾರ್ಚ್ 21ರವರೆಗೆ ವಿಸ್ತರಿಸಿಕೊಂಡರು. (ಪೆರೋಲ್ ವಿಸ್ತರಣೆಗಾಗಿ ಸಂಜಯದತ್ ಮಹಾರಾಷ್ಟ್ರ ಗೃಹ ಸಚಿವರ ಮೂಲಕ ಜೈಲು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು ಎನ್ನಲಾಗುತ್ತಿದೆ)
ಇದೀಗ ದತ್ ಅವರ ಪೆರೋಲ್ ಪ್ರಕರಣದ ವಿರುದ್ಧ ಹೈಕೋರ್ಟ್ ಕಿಡಿಕಾರಿದ್ದು, ಮಹಾರಾಷ್ಟ್ರ ಸರ್ಕಾರ ಕೂಡ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


