ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು: ಕೇಜ್ರಿವಾಲ್

ನವದೆಹಲಿ: ಪೂರ್ವಾಗ್ರಹ ಪೀಡಿತ ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಕಿಡಿಕಾರಿರುವ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕೆಲ ಚುನಾವಣಾ ಸಮೀಕ್ಷಾ ಸಂಸ್ಥೆಗಳ ಅಕ್ರಮದ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದು ನಡೆಸಿದ್ದ ರಹಸ್ಯ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಸುದ್ದಿಗೋಷ್ಟಿ ಕರೆದಿದ್ದ ಅರವಿಂದ್ ಕೇಜ್ರಿವಾಲ್, 'ಇತ್ತೀಚೆಗಿನ ಚುನಾವಣಾ ಪೂರ್ವ ಸಮೀಕ್ಷೆಗಳು ನಂಬಿಕೆಗೆ ಅರ್ಹವಲ್ಲ. ಯಾವುದೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮುಲಾಜಿಗೆ ಒಳಗಾಗಿ ಮಾಧ್ಯಮಗಳು ಸಮೀಕ್ಷೆಯ ಮಾಹಿತಿಯನ್ನೇ ತಿರುಚುತ್ತಿವೆ' ಎಂದು ಹೇಳಿದರು.
'ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋಧ್ಯಮ, ಜನತೆಗೆ ಪಾರದರ್ಶಕವಾಗಿರಬೇಕು. ಮಾಧ್ಯಮಗಳು ತಮ್ಮ ಆದಾಯದ ಮೂಲವನ್ನು ದೇಶದ ಜನತೆಗೆ ತಿಳಿಸಬೇಕು. ಪತ್ರಕರ್ತರು ಮತ್ತು ಮಾಧ್ಯಮಗಳ ಸಂಪಾದಕರು ತಮ್ಮ ಆದಾಯದ ಮೂಲ ಮತ್ತು ತಮ್ಮ ಮಾಸಿಕ ಭತ್ಯೆ ಕುರಿತ ಮಾಹಿತಿಗಳನ್ನು ಬಹಿರಂಗ ಪಡಿಸಬೇಕು' ಎಂದು ಕೇಜ್ರಿವಾಲ್ ಆಗ್ರಹಿಸಿದರು. 'ಕೆಲ ಮಾಧ್ಯಮಗಳ ಒಡೆತನವನ್ನು ಉಧ್ಯಮಿಗಳು ಮತ್ತು ರಾಜಕಾರಣಿಗಳು ಹೊಂದಿದ್ದಾರೆ. ಹೀಗಾಗಿ ಮಾಧ್ಯಮಗಳು ತಮ್ಮ ಮಾಲೀಕತ್ವದ ಕುರಿತ ಮಾಹಿತಿಗಳನ್ನು ಜನತೆಗೆ ತಿಳಿಸಬೇಕು'.
'ಅಂತೆಯೇ ಮಾಧ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಷೇರುದಾರರ ಕುರಿತ ಮಾಹಿತಿಯನ್ನು ಕೂಡ ಅವು ಬಹಿರಂಗಪಡಿಸಬೇಕು. ಹೀಗಾದಾಗ ಮಾತ್ರವೇ ಮಾಧ್ಯಮಗಳ ಬಗ್ಗೆ ಜನತೆಯಲ್ಲಿ ನಂಬಿಕೆ ಮೂಡುತ್ತದೆ. ಆದರೆ ಇತ್ತೀಚೆಗೆ ಬಹಿರಂಗವಾಗಿರುವ ಮಾಧ್ಯಮಗಳ ಚುನಾವಣಾ ಪೂರ್ವ ಸಮೀಕ್ಷೆಯ ಕುರಿತ ರಹಸ್ಯ ಕಾರ್ಯಾಚರಣೆ ಮಾಧ್ಯಮಗಳ ವೃತ್ತಿಪರತೆಯನ್ನು ಪ್ರಶ್ನಿಸುವಂತಿದೆ'.
'ಎಎಪಿ ವಿರುದ್ಧ ಕೆಲವರು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಹೀಗಾಗಿಯೇ ತಮ್ಮ ತಮ್ಮ ಸಮೀಕ್ಷೆಯಲ್ಲಿ ನಿಜಾಂಶವನ್ನು ಮರೆ ಮಾಚಿದ್ದಾರೆ. ಹೀಗಾಗಿ ಈ ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಕೇಜ್ರಿವಾಲ್ ಆಗ್ರಹಿಸಿದರು.
ನಿನ್ನೆ ಖಾಸಗಿ ಸುದ್ದಿ ವಾಹಿನಿಯೊಂದು ಕೆಲ ಸಮೀಕ್ಷಾ ಸಂಸ್ಥೆಗಳು ಹೇಗೆ ಚುನಾವಣಾ ಪೂರ್ವ ಸಮೀಕ್ಷಾ ವರದಿಯನ್ನು ಬದಲಿಸುತ್ತಿವೆ ಎಂಬುದರ ಕುರಿತು ರಹಸ್ಯ ಕಾರ್ಯಾಚರಣೆಯನ್ನು ನಡೆಸಿತ್ತು. ಕಾರ್ಯಾಚರಣೆಯಲ್ಲಿ ಕೆಲ ಏಜೆಂಟರುಗಳು ಹೇಗೆ ಸಮೀಕ್ಷಾ ವರದಿಯನ್ನು ತಿರುಚುತ್ತಾರೆ ಎನ್ನವುದನ್ನು ತೋರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


