ಈಗಿನ ಸುದ್ದಿ

ಮೋದಿ ನನ್ನ ಒಳ್ಳೆಯ ಸ್ನೇಹಿತ: ಎಂ.ಕರುಣಾನಿಧಿ

ಮೋದಿ ನನ್ನ ಒಳ್ಳೆಯ ಸ್ನೇಹಿತ: ಎಂ.ಕರುಣಾನಿಧಿ
Published On :

ಚೆನ್ನೈ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಓರ್ವ ಶ್ರಮದಾಯಕ ವ್ಯಕ್ತಿ ಮತ್ತು ಒಳ್ಳೆಯ ಗೆಳೆಯ ಎಂದು ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಹೇಳಿದ್ದಾರೆ.

ತಮಿಳು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕರುಣಾ ನಿಧಿ ಅವರು, ಲೋಕಸಭಾ ಚುನಾವಣೆಗಾಗಿ ನಿರಂತರ ಪ್ರಚಾರದಲ್ಲಿ ತೊಡಗಿರುವ ನರೇಂದ್ರ ಮೋದಿ ಅವರು ಓರ್ವ ಶ್ರಮದಾಯಕ ವ್ಯಕ್ತಿಯಾಗಿದ್ದು, ನನಗೂ ಕೂಡ ಆತ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದಾರೆ.

'ನರೇಂದ್ರ ಮೋದಿ ಅವರು ಪ್ರತಿನಿತ್ಯ ಒಂದಿಲ್ಲೊಂದು ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಅವರ ಶ್ರಮದಾಯಕ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ವೈಯುಕ್ತಿಕವಾಗಿ ಹೇಳಬೇಕೆಂದರೆ ನರೇಂದ್ರ ಮೋದಿ ಒಳ್ಳೆಯ ಸ್ನೇಹಿತ ಎಂದು ಕರುಣಾನಿಧಿ ಹೇಳಿದರು.

ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಬಿಜೆಪಿ ಕೋಮುವಾದಿ ಪಕ್ಷವೆಂದು ನೀವು ಪ್ರಮಾಣ ಪತ್ರ ನೀಡುತ್ತಿದ್ದೀರಾ?' ಎಂದ ಕರುಣಾನಿಧಿ 'ಮೈತ್ರಿ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯ ನಂತರದ ಪರಿಸ್ಥಿತಿಗಳು ಹೇಗಿರುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎಂದರು.

ಕರುಣಾನಿಧಿ ಅವರ ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದ್ದು, 2ಜಿ ಹಗರಣದ ನಂತರ ಯುಪಿಎ ತೊರೆದಿದ್ದ ಡಿಎಂಕೆ ಪಕ್ಷ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕರುಣಾನಿಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ಪಕ್ಷದ ಕಾರ್ಯದರ್ಶಿ ಟಿಕೆಎಸ್ ಇಳಂಗೋವನ್ ಅವರು, 'ಪಕ್ಷದ ಮುಖ್ಯಸ್ಥರ ಹೇಳಿಕೆ ಅವರ ವೈಯುಕ್ತಿಕವಾದದ್ದು, ಅವರ ಈ ಹೇಳಿಕೆಯಲ್ಲಿ ಅವರ ರಾಜಕೀಯ ಪ್ರಭುದ್ಧತೆ ಕಾಣುತ್ತದೆ. ಆದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪ ಸದ್ಯಕ್ಕಂತೂ ಇಲ್ಲ' ಎಂದು ಹೇಳಿದ್ದಾರೆ.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಕರುಣಾನಿಧಿ ಅವರ ಡಿಎಂಕೆ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ತನ್ನ ಬೆಂಬಲ ನೀಡಿತ್ತು. ಆ ಬಳಿಕ 2004ರ ಲೋಕಸಭಾ ಚುನಾವಣೆಗೂ ಮುನ್ನ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಎನ್‌ಡಿಎ ಮೈತ್ರಿಕೂಟವನ್ನು ತೊರೆದು ಡಿಎಂಕೆ ಹೊರಬರಬೇಕಾಯಿತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಯುಪಿಎಗೆ ಕರುಣಾ ನಿಧಿ ಅವರು ಬೆಂಬಲ ನೀಡಿದ್ದರು. ಅಲ್ಲದೆ ಡಿಎಂಕೆ ಪಕ್ಷದ ಮುಖಂಡರಾದ ಎ.ರಾಜಾ ಮತ್ತು ಕರುಣಾನಿಧಿ ಪುತ್ರಿ ಕನ್ನಿಮೋಳಿ ಅವರು ಕೇಂದ್ರ ಸಚಿವರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.