ಖ್ಯಾತ ನಟ,ರಂಗಕರ್ಮಿ ಸಿ.ಆರ್.ಸಿಂಹ ವಿಧಿವಶ

ಬೆಂಗಳೂರು: ಖ್ಯಾತ ಚಿತ್ರನಟ ಮತ್ತು ರಂಗಕರ್ಮಿ ಸಿ.ಆರ್.ಸಿಂಹ ಅವರು ವಿಧಿವಶರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸಿ.ಆರ್.ಸಿಂಹ ಅವರು ಬೆಂಗಳೂರಿನ ಜಯನಗರದಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಿಂಹ ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರನ್ನು ಜಯನಗರದ ರಾಗಿಗುಡ್ಡದ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖ್ಯಾತ ನಟ ಶ್ರೀನಾಥ್ ಅವರ ಸಹೋದರ ಕೂಡ ಆಗಿರುವ ಸಿಂಹ ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
1942 ಜೂನ್ 16ರಂದು ಚನ್ನಪಟ್ಟಣದಲ್ಲಿ ಜನಿಸಿದ್ದ ಸಿಂಹ ಅವರು, ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶ ಮಾಡಿದ್ದರು. 1972ರಲ್ಲಿ ನಟರಂಗ ಎಂಬ ಕಲಾತಂಡವನ್ನು ಕಟ್ಟಿದ್ದರು. ಅನಂತರ 1983ರಲ್ಲಿ ವೇದಿಕೆ ತಂಡವನ್ನು ಕಟ್ಟಿ, ಕಾಕನಕೋಟೆ, ತುಘಲಕ್ ಮತ್ತು ಸಂಕ್ರಾಂತಿಯಂತಹ ಹಲವು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದರು.
ಸುಮಾರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಸಿಂಹ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2003ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಸಿಂಹ ಅವರು ಪಡೆದಿದ್ದರು.
ಇಂದಿನ ರಾಮಾಯಣ, ನೀ ಬರೆದ ಕಾದಂಬರಿ ಪರಮೇಶಿ ಪ್ರೇಮ ಪ್ರಸಂಗ, ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆಯಂತಹ ಹಲವು ಚಿತ್ರಗಳಲ್ಲಿ ಸಿಂಹ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲದೆ ಖ್ಯಾತ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ನಿರ್ದೇಶಿಸಿದ್ದ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿಯೂ ಸಿಂಹ ಅವರು ಅಭಿನಯಿಸಿದ್ದರು.
ಕೇವಲ ನಟನೆ ಮಾತ್ರವಲ್ಲದೆ ಸಿಂಹ ಅವರು ಕಾಕನಕೋಟೆ, ಶಿಕಾರಿ, ಸಿಂಹಾಸನ, ಅಶ್ವಮೇಧ ಮತ್ತು ಅಂಗೈಯಲ್ಲಿ ಅಪ್ಸರೆ ಎಂಬ ಐದು ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದರು. ಇತ್ತೀಚೆಗೆ ಅವರ ಮಗ ರಿತ್ವಿಕ್ ಸಿಂಹ ಅವರ ನಿರ್ದೇಶನದ 'ರಸಋಷಿ ಕುವೆಂಪು' ಎಂಬ ಚಿತ್ರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪಾತ್ರದಲ್ಲಿ ಅಭಿನಯಿಸಿದ್ದರು.
ಸಿ.ಆರ್.ಸಿಂಹ ಅವರ ಅಗಲಿಕೆಯ ವಿಚಾರ ಕೇಳಿ ಚಿತ್ರರಂಗ ಮತ್ತು ನಾಟಕ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ವೇಳೆಗೆ ಸಿಂಹ ಅವರ ಪಾರ್ಥೀವ ಶರೀರವನ್ನು ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು, ನಾಳೆ ಸಂಜೆ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಂಹದ ಹೆಜ್ಜೆಗುರುತು
72 ವರ್ಷದ ಅವರು ರಂಗಭೂಮಿ, ದೂರದರ್ಶನ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಿಂಹ ಅವರು 1942ರಲ್ಲಿ ಚನ್ನಪಟ್ಟಣದಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಿ ಶಾಸ್ತ್ರಿ, ತಾಯಿ ಲಲಿತಮ್ಮ. 'ಪ್ರಣಯರಾಜ' ಎಂದೇ ಹೆಸರಾದ ಚಿತ್ರ ನಟ ಶ್ರೀನಾಥ್ ಅವರು ಸಿಂಹ ಅವರ ಸಹೋದರ.
ಬನಶಂಕರಿಯ ರಿಂಗ್ ರಸ್ತೆಯಲ್ಲಿ 23 ವರ್ಷಗಳ ಹಿಂದೆ ನಿರ್ಮಿಸಿದ್ದ ಅವರ ಮನೆ 'ಸಿಂಹ ಗುಹೆ' ಕೂಡಾ ಅವರಷ್ಟೇ ಖ್ಯಾತ.
ಸಿ. ಆರ್. ಸಿಂಹ ಅವರು ಉತ್ತಮ ಕಲಾವಿದರಷ್ಟೇ ಅಲ್ಲ, ಉತ್ತಮ ನಿರ್ದೇಶಕರೂ ಹೌದು. ಶೇಕ್ಸ್ ಪಿಯರ್ ನ ಒಥೆಲೊ, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕಗಳನ್ನು ಮತ್ತು ಕಾಕನಕೋಟೆ, ಶಿಕಾರಿ, ಅಶ್ವಮೇಧ, ಅಂಗೈಯಲ್ಲಿ ಅಪ್ಸರೆ ಚಲನಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.
ಅಭಿನಯದ ನಾಟಕಗಳು
* ದಿ ಜೂ ಸ್ಟೋರಿ
* ಸೂರ್ಯ ಶಿಕಾರಿ
* ದಿ ಆಡ್ ಕಪಲ್
* ಮ್ಯಾನ್ ಆಫ್ ಡೆಸ್ಟಿನಿ
* ತುಘಲಕ್
* ಸಂಕ್ರಾಂತಿ
ಅಭಿನಯದ ಚಿತ್ರಗಳು
* ಸಂಸ್ಕಾರ
* ಸಂಕಲ್ಪ
* ಚಿತೆಗೂ ಚಿಂತೆ
* ಬರ
* ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು
ಸಂದ ಪ್ರಶಸ್ತಿಗಳು
* ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
* ಕಾಕನಕೋಟೆ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ
* ಶಂಕರಗೌಡ ರಂಗಭೂಮಿ
* ಆರ್ಯಭಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


