ಶೀಘ್ರದಲ್ಲೇ ಶ್ರೀರಾಮುಲು ಬಿಜೆಪಿಗೆ ಮರು ಸೇರ್ಪಡೆ?

ಬಳ್ಳಾರಿ: ಬಿಜೆಪಿಯಿಂದ ಅಧಿಕೃತ ಆಹ್ವಾನ ಬಂದ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಬಿಜೆಪಿ ಪಕ್ಷಕ್ಕೆ ಶ್ರೀರಾಮುಲು ಅವರು ಮರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಬಿಎಸ್ ಆರ್ ಕಾಂಗ್ರೆಸ್ ಶ್ರೀರಾಮುಲು ಅವರು, ಬಿಜೆಪಿ ಪಕ್ಷಕ್ಕೆ ವಾಪಸಾಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಂದ ಹಲವು ಭಾರಿ ಆಹ್ವಾನ ಬಂದಿದೆ. ಹೀಗಾಗಿ ತಾವು ಮತ್ತೆ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾಗುವತ್ತ ಚಿಂತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ದೇಶದ ಹಿತದೃಷ್ಟಿಯಿಂದ ನೀವು ಬಿಜೆಪಿಗೆ ಮರು ಸೇರ್ಪಡೆಯಾಗುವುದು ಸೂಕ್ತ ಎಂದು ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ಸಲಹೆ ನೀಡಿದ್ದಾರೆ. ಅಲ್ಲದೆ ಅಧಿಕೃತವಾಗಿ ನನಗೆ ಆಹ್ವಾನ ನೀಡಿದ್ದಾರೆ. ಆದರೆ ಈ ಬಗ್ಗೆ ನಾನು ನನ್ನ ಕಾರ್ಯಕರ್ತರು ಮತ್ತು ಬಳ್ಳಾರಿ ಜನತೆಯೊಂದಿಗೆ ಮಾತುಕತೆ ನಡೆಸುತ್ತೇನೆ. ಅಲ್ಲದೆ ಜನಾರ್ಧನ ರೆಡ್ಡಿ ಅವರನ್ನು ಕಂಡು ಈ ಬಗ್ಗೆ ಚರ್ಚಿಸಿದ್ದೇನೆ. ಇನ್ನೆರಡು ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ನಡೆದ ಆಂತರಿಕ ಕಲಹದಿಂದಾಗಿ ಬಿಜೆಪಿಯಲ್ಲಿದ್ದ ಶ್ರೀರಾಮುಲು ಅವರು ಪಕ್ಷವನ್ನು ತೊರೆದು, ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಅವರೊಂದಿಗೆ ಸೋಮಶೇಖರ ರೆಡ್ಡಿ ಸೇರಿದಂತೆ ಜನಾರ್ಧನ ರೆಡ್ಡಿ ಬೆಂಬಲಿಗ ಶಾಸಕ ಮತ್ತು ಸಚಿವರು ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇದೀಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ತೊರೆದಿದ್ದವರನ್ನು ಓಲೈಸುತ್ತಿರುವ ಬಿಜೆಪಿ ನಾಯಕರು ಪಕ್ಷ ತೊರೆದಿದ್ದ ನಾಯಕರನ್ನು ಮರುಸೇರ್ಪಡೆಗೊಳಿಸುತ್ತಿದ್ದಾರೆ.
ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಮರುಸೇರ್ಪಡೆಯ ನೇತೃತ್ವ ವಹಿಸಿದ್ದು, ಈಗಾಗಲೇ ಈ ಬಗ್ಗೆ ಪಕ್ಷದ ಮತ್ತೋರ್ವ ಮುಖಂಡೆ ಸುಷ್ಮಾ ಸ್ವರಾಜ್ ಅವರೊಂದಿಗೆ ಚರ್ಚಿದ್ದಾರೆ. ಯಡಿಯೂರಪ್ಪ ಅವರನ್ನು ಕೂಡ ಇದೇ ರೀತಿ ರಾಜನಾಥ್ ಸಿಂಗ್ ಅವರು ಓಲೈಸಿ ಪಕ್ಷಕ್ಕೆ ವಾಪಸ್ ಕರೆಸಿಕೊಂಡಿದ್ದರು. ಪಕ್ಷದಿಂದ ಬೇರ್ಪಟ್ಟು ಕೆಜೆಪಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಬಿಜೆಪಿ ಮರು ಸೇರ್ಪಡೆಯಾಗಿ ಕೆಜಿಪಿಯನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


