ಈಗಿನ ಸುದ್ದಿ

ಕೇರಳದ ರಾಜಕಾರಣಿಗಳ ನಿದ್ದೆ ಕೆಡಿಸಿದ ಸರಿತಾ ಹೇಳಿಕೆ

ಕೇರಳದ ರಾಜಕಾರಣಿಗಳ ನಿದ್ದೆ ಕೆಡಿಸಿದ ಸರಿತಾ ಹೇಳಿಕೆ
Published On :

ಕೊಚ್ಚಿ : ಕೇರಳದಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಸೋಲಾರ್ ಪ್ಯಾನೆಲ್ ಹಂಚಿಕೆ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಇದೀಗ ಜಾಮೀನು ಪಡೆದು ಹೊರ ಬಂದ ನಂತರ ಕೇರಳದ ರಾಜಕಾರಣಿಗಳ ನಿದ್ದೆ ಕೆಡುವಂತೆ ಮಾಡಿದ್ದಾರೆ.

ಜಾಮೀನು ಪಡೆದು ಹೊರ ಬಂದ ಸರಿತಾ, ನನಗೆ ನಿದ್ದೆಯಿಲ್ಲದಂತೆ ಮಾಡಿದ ಎಲ್ಲ ರಾಜಕಾರಣಿಗಳಿಗೆ ನಿದ್ದೆಯಿಲ್ಲದಂತೆ ಮಾಡುತ್ತೇನೆ. ಎಲ್ಲ ವಿಷಯಗಳನ್ನು ನಾನು ಬಹಿರಂಗಪಡಿಸಲಿದ್ದೇನೆ ಎಂದು ಮಾಧ್ಯಮದವರಲ್ಲಿ ಹೇಳಿದ್ದಾರೆ.

ಏತನ್ಮಧ್ಯೆ, ಸೋಲಾರ್ ಯೋಜನೆಯ ಬಗ್ಗೆ ಕಣ್ಣೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಕಾಂಗ್ರೆಸ್ ಶಾಸಕ ಎ.ಪಿ ಅಬ್ದುಲ್ಲ ಕುಟ್ಟಿ ತನಗೆ ಆಗಾಗ ಫೋನ್ ಮತ್ತು ಎಸ್ಸೆಮ್ಮೆಸ್ ಮಾಡುತ್ತಿದ್ದರು ಎಂದು ಸರಿತಾ ಆರೋಪಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಸೋಲಾರ್ ಹಗರಣ ಬೆಳಕಿಗೆ ಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸರಿತಾ ನಾಯರ್ ಅವರನ್ನು ನಂತರ ಸರಿತಾ ಅವರ ಲಿವ್ ಇನ್ ಪಾಟ್ನರ್ ಬಿಜು ಬಾಲಕೃಷ್ಣ ಅವರನ್ನು ಬಂಧಿಸಲಾಗಿತ್ತು. ಇವರಿಬ್ಬರೂ ಬಂಧನಕ್ಕೊಳಗಾದಾಗ ತಮ್ಮೊಂದಿಗೆ ಯಾರ್ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದರು ಎಂಬ ವಿಷಯ ಬಹಿರಂಗಗೊಂಡಿತ್ತು. ಈ ಪಟ್ಟಿಯಲ್ಲಿ ಹಲವು ಮಹನೀಯರ, ರಾಜಕಾರಣಿಗಳ ಹೆಸರು ಕಾಣಿಸಿಕೊಂಡಿದ್ದು, ಇದು ಕೇರಳ ರಾಜಕೀಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿತ್ತು.

ಆದಾಗ್ಯೂ, ಸರಿತಾ ಅವರ ಆರೋಪವನ್ನು ಅಬ್ದುಲ್ಲ ಕುಟ್ಟಿ ನಿರಾಕರಿಸಿದ್ದಾರೆ.

ನನ್ನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಹುನ್ನಾರ ಇದು. ಈ ಬಗ್ಗೆ ನಾನು ಯಾವುದೇ ತನಿಖೆಗೆ ಸಿದ್ಧವಾಗಿದ್ದೇನೆ ಎಂದು ಕುಟ್ಟಿ ಹೇಳಿದ್ದಾರೆ.

ಈ ಹಗರಣದಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಹೆಸರೂ ಕೇಳಿ ಬಂದಿತ್ತು. ಆದರೆ ಚಾಂಡಿ ಅವರಿಗೂ ಈ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಅವರ ಹೆಸರನ್ನು ಇದಕ್ಕೆ ಎಳೆದು ತರಬೇಡಿ ಎಂದು ಸರಿತಾ ಹೇಳಿದ್ದರು.

ಪ್ರಸ್ತುತ ಹಗರಣದ ಬಗ್ಗೆ ತನಿಖೆ ನಡೆಯುತ್ತಿದ್ದಂತೆ ಸರಿತಾ ನಾಯರ್ ಜತೆ ಆಪ್ತರಾಗಿದ್ದ ಉಮ್ಮನ್ ಚಾಂಡಿಯವರ ಕಚೇರಿಯ ಮೂವರು ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದರು.

ಸೋಲಾರ್ ಹಗರಣ ಬಯಲಾದ ಅಂದಿನಿಂದ ಇಂದಿನವರೆಗೆ ಸರಿತಾ ನಾಯರ್ ಜತೆ ಸಂಪರ್ಕವಿಟ್ಟುಕೊಂಡಿರುವ ಹಲವು ಕೇಂದ್ರ ಹಾಗು ರಾಜ್ಯ ಸಚಿವರ ಹೆಸರುಗಳು ಸುದ್ದಿಗೆ ಗ್ರಾಸವಾಗುತ್ತಲೇ ಇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.