"ಶೀಲಾ ದೀಕ್ಷಿತ್ ಸೋತಿದ್ದಾಯ್ತು, ಈಗ ಮೋದಿ ಸರದಿ'

ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್ ಕಣಕ್ಕೆ?
ಅಹಮದಾಬಾದ್: ಇಂದಿನಿಂದ ನಾಲ್ಕು ದಿನಗಳ ಕಾಲ ಗುಜರಾತ್ನಲ್ಲಿ ಪ್ರವಾಸ ಕೈಗೊಂಡಿರುವ ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಡಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ರಾಷ್ಟ್ರ ರಾಜಧಾನಿಯ ಘಟಾನುಘಟಿ ನಾಯಕರನ್ನು ಸೋಲಿಸಿದ್ದ ಆಪ್, ಈಗ ಮೋದಿಯ ಸರದಿ ಎಂದು ಗುಡುಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮೂಲಕ ದೆಹಲಿ ಗದ್ದುಗೆ ಏರಿದ್ದ ಅರವಿಂದ್ ಕೇಜ್ರಿವಾಲ್ ಮೊದಲ ಬಾರಿ ಮೋದಿ ನಾಡಿಗೆ ಭೇಟಿ ನೀಡಿದ್ದಾರೆ.
ಗುಜರಾತ್ನಲ್ಲೂ ಆಪ್ ನಾಯಕನಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದ್ದು, ಇಂದು ಬೆಳಗ್ಗೆ ಅಹಮದಾಬಾದ್ನ ವಿಮಾನ ನಿಲ್ದಾಣ ಬಂದಿಳಿದ ಕೇಜ್ರಿವಾಲ್ರನ್ನು ಭಾರಿ ಸಂಖ್ಯೆಯಲ್ಲಿ ಆಪ್ ಕಾರ್ಯಕರ್ತರು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ಏಚ್ವಾಡಾ ಗ್ರಾಮಕ್ಕೆ ಭೇಟಿ ನೀಡಿದ ಕೇಜ್ರಿವಾಲ್, ಅಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಆಪ್ ನಾಯಕರಾದ ಮನೀಷ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೇಜ್ರಿವಾಲ್ ಪ್ರವಾಸಕ್ಕೆ ಸಾಥ್ ನೀಡಿದ್ದಾರೆ. ಗುಜರಾತ್ನಲ್ಲಿ ಕೇಜ್ರಿವಾಲ್ರನ್ನು ಆಪ್ ಪಕ್ಷದ ಚಿಹ್ನೆಯಾದ 'ಪೊರಕೆ' ಹಿಡಿದು ಬೆಂಬಲಿಗರು ಸ್ವಾಗತಿಸಿದ್ದಾರೆ. "ಶೀಲಾ ದೀಕ್ಷಿತ್ ಹಾರಿ ಹೈ, ಅಬ್ ಮೋದಿ ಕಿ ಬಾರಿ ಹೈ " ( ಶೀಲಾ ದೀಕ್ಷಿತ್ ಸೋತಿದ್ದಾರೆ, ಈಗ ಮೊದಿಯ ಸರದಿ) ಎಂದು ಘೋಷಣೆ ಕೂಗುತ್ತಾ ಆಪ್ ಬೆಂಬಲಿಗರು ಕೇಜ್ರಿವಾಲ್ರನ್ನು ಸ್ವಾಗತಿಸಿದ್ದರು.
ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಆರೋಪದ ಮೇಲೆ ಗುಜರಾತ್ ಪೊಲೀಸರು ಕೇಜ್ರಿವಾಲ್ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಘಟನೆಯೂ ನಡೆಯಿತು. ಈ ಘಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಮೋದಿ ಪೊಲೀಸರ ಮೂಲಕ ತಮ್ಮ ಪ್ರವಾಸವನ್ನು ತಡೆಯುವ ಯತ್ನ ಮಾಡುತ್ತಿದ್ದಾರೆ. ತಮ್ಮ ಸರ್ಕಾರದ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ಎಂಬ ಭಯದಿಂದ ಮೋದಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಜನ ಸಾಮಾನ್ಯರ ಮತ್ತು ರೈತರ ವಿರೋಧಿ. ಅವರು ಗುಜರಾತ್ನಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಗುಜರಾತ್ ಅಭಿವೃದ್ಧಿಯ ಬಗ್ಗೆ ಮೋದಿ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಕೇಜ್ರಿವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


