ಬಿಎಸ್ವೈ ಟೆಲಿಕಾಂ ಮಿನಿಸ್ಟರ್, ಶ್ರೀರಾಮುಲು ಗೆ 'ಮೈನಿಂಗ್': ಕೇಜ್ರಿವಾಲ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸಂಪುಟದಲ್ಲಿ ಬಿಎಸ್.ಯಡಿಯೂರಪ್ಪ ಅವರಿಗೆ ಟೆಲಿಕಾಂ ಮತ್ತು ಶ್ರೀರಾಮುಲು ಅವರಿಗೆ ಮೈನಿಂಗ್ ಸಚಿವ ಸ್ಥಾನ ದೊರೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ, ಫ್ರೀಡಂ ಪಾರ್ಕ್ನಲ್ಲಿ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು ಆರಂಭದಲ್ಲಿ 60 ಕೋಟಿ ಕನ್ನಡಿಗರಿಗೆ ಕನ್ನಡದಲ್ಲಿಯೇ ಶುಭಾಷಯ ಹೇಳಿದರು. ನಂತರ ಕರ್ನಾಟದಕದ ಭ್ರಷ್ಟ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಅವರು, ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅತ್ಯಂತ ಭ್ರಷ್ಟ ರಾಜಕಾರಣಿ ಎಂದು ಹೇಳಿದರು. ಕೇಜ್ರಿವಾಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೊದಲ ಸ್ಥಾನದಲ್ಲಿದ್ದರೆ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಎರಡನೇ ಸ್ಥಾನ ನೀಡಲಾಗಿದೆ. ಉಳಿದಂತೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಹರತಾಳು ಹಾಲಪ್ಪ, ಮಾಜಿ ಸಚಿವ ಜನಾರ್ಧನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿ.ಶ್ರೀರಾಮುಲು ಮತ್ತು ಆನಂದ್ ಸಿಂಗ್ ಅವರನ್ನು ಕಳಂಕಿತರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಪರವಾಗಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರೋಷನ್ ಬೇಗ್, ಇಂಧನ ಸಚಿವ ಡಿಕೆ.ಶಿವಕುಮಾರ್ ಅವರನ್ನು ಭ್ರಷ್ಟರ ಪಟ್ಟಿಗೆ ಸೇರಿಸಲಾಗಿದೆ.
ಪತ್ರಕರ್ತರ ಮೇಲಿನ ಹಲ್ಲೆಗೆ ಕೇಜ್ರಿವಾಲ್ ಖಂಡನೆ
ಇದೇ ವೇಳೆ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತರ ಮೇಲೆ ಸಚಿವರೊಬ್ಬರು ನಡೆಸಿದ ಹಲ್ಲೆ ಪ್ರಕರಣವನ್ನು ಪ್ರಸ್ಥಾಪಿಸಿದ ಕೇಜ್ರಿವಾಲ್ ಅವರು, ಪ್ರಕರಣವನ್ನು ಖಂಡಿಸಿದರು. 'ಪತ್ರಕರ್ತರ ಮೇಲೆ ದಾಳಿ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಂತಹವರು ರಾಜ್ಯದ ಜನತೆಯನ್ನು ಹೇಗೆ ರಕ್ಷಿಸುತ್ತಾರೆ. ಪತ್ರಕರ್ತರಿಗೆ ರಕ್ಷಣೆ ಕೊಡಲಾಗದ ಸರ್ಕಾರ ಸಾಮಾನ್ಯ ಜನರಿಗೆ ಯಾವ ರೀತಿಯ ರಕ್ಷಣೆ ನೀಡೀತು' ಎಂದು ಅವರು ಪ್ರಶ್ನಿಸಿದರು. ಅಲ್ಲದೆ ಸಚಿವರ ವಿರುದ್ಧದ ವಾಹಿನಿಯ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಜೊತೆಯಾಗಿರುತ್ತದೆ ಎಂದು ಕೇಜ್ರಿವಾಲ್ ಆಶ್ವಾಸನೆ ನೀಡಿದರು. ಅಂತೆಯೇ ಕೇಂದ್ರದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ದೇಶದ ಮಾಧ್ಯಮಗಳನ್ನು ಸ್ವಾತಂತ್ರ್ಯವಾಗಿರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಮಾತು ತಪ್ಪಿದ ಕಾಂಗ್ರೆಸ್ ವಿರುದ್ದ ಕೇಜ್ರಿ ವಾಗ್ದಾಳಿ
ಇದೇ ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟರನ್ನು ಅಧಿಕಾರದಿಂದ ದೂರವಿಡುತ್ತೇವೆ ಎಂದಿದ್ದ ಕಾಂಗ್ರೆಸ್, ಚುನವಾಣೆಯ ಗೆಲುವಿನ ನಂತರ ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಕಳಂಕಿತ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇಕೆ ಎಂದು ಕೇಜ್ರಿವಾಲ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದರು.
ಗುಜರಾತ್ನಲ್ಲಿ ಮೋದಿ ಸಾಧನೆ ಶೂನ್ಯ
ಗುಜರಾತ್ ನಲ್ಲಿ ಅಭಿವೃದ್ಧಿ ಸಾಧಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ನಾನು ಗುಜರಾತ್ ನಲ್ಲಿ ಪ್ರವಾಸ ಮಾಡಿ ಸತ್ಯಾಂಶ ತಿಳಿದುಕೊಂಡಿದ್ದೇನೆ. ಅಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗಳಿಗೂ ಇಂತಿಷ್ಟು ಲಂಚ ನೀಡಬೇಕಿದೆ. ತಮ್ಮ ಸಂಪುಟದಲ್ಲಿಯೇ ಭ್ರಷ್ಟ ಸಚಿವರನ್ನು ಉಳಿಸಿಕೊಂಡಿರುವ ನರೇಂದ್ರ ಮೋದಿ ಅವರು ಎಂತಹ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಿದ್ದಾರೆ..? ಮೋದಿ ಸಂಪುಟದ ಬಾಬು ಭೋಖಾರಿಯಾ ಅವರು ಮೈನಿಂಗ್ ಪ್ರಕರಣದಲ್ಲಿ ಸಿಲುಕಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಅದೇ ರೀತಿ ಗುಜರಾತ್ ಗೃಹ ಸಚಿವ ಅಮಿತ್ ಶಾ ಅವರು ಮಹಿಳೆ ವಿರುದ್ಧ ಸ್ಪೈಯಿಂಗ್ ಪ್ರಕರಣ ವಿಚಾರಣೆ ಎದುರಿಸುತ್ತಿದ್ದಾರೆ. ಮತ್ತೋರ್ವ ಪುರುಷೋತ್ತಮ ಸೌಲಂಕಿ ಮೈನಿಂಗ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇಂತಹವರನ್ನು ಮೋದಿ ಅವರು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳುವ ಮೂಲಕ ನರೇಂದ್ರ ಮೋದಿ ದೇಶದ ಜನತೆಗೆ ಎಂತಹ ಸಂದೇಶ ಸಾರುತ್ತಿದ್ದಾರೆ..?
ಗುಜರಾತ್ ಅಭಿವೃದ್ದಿ ಬಗ್ಗೆ ಮಾತನಾಡಲು ಮೋದಿ ಅವರನ್ನು ಭೇಟಿ ಮಾಡಲು ಮುಂದಾಗಿದ್ದೆ. ಆದರೆ ಗುಜರಾತ್ ಪೊಲೀಸರು ನನ್ನನ್ನು ಐದು ಕಿಮಿ ದೂರದಲ್ಲೇ ತಡೆ ಹಿಡಿದರು.. ಭೇಟಿಗೆ ಅನುಮತಿ ಬೇಕೆಂದು ನನ್ನನ್ನು ಅಲ್ಲಿಯೇ ತಡೆ ಹಿಡಿದರು. ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ಮುಖಗಳು ಮಾತ್ರ ಬದಲಾಗುತ್ತವೆ. ಆದರೆ ನಮ್ಮ ಪರಿಸ್ಥಿತಿ ಮಾತ್ರ ಬದಲಾಗುವುದಿಲ್ಲ. ನರೇಂದ್ರ ಮೋದಿ ಅವರು ರೈತರಿಂದ ಭೂಮಿಗಳನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿ ಸಂಸ್ಥೆಗೆ ನೀಡುತ್ತಿದ್ದಾರೆ. ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತ್ ನಲ್ಲಿ ಸುಮಾರು 8000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಶೇ.11 ರಷ್ಟು ಅಭಿವೃದ್ದಿಯಾಗಿದೆ ಎಂದು ಮೋದಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ನಾನು ಗಮನಿಸಿದಂತೆ ಕಳೆದ 5 ವರ್ಷಗಳಿಂದ ಗುಜರಾತ್ ಕೃಷಿ ನಕಾರಾತ್ಮಕ ಅಭಿವೃದ್ದಿಯಾಗಿದೆ. ಗುಜರಾತ್ ನಲ್ಲಿ 16 ಸಾವಿರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗಿವೆ. ಇದು ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿ...
ಇದನ್ನು ಮಾಧ್ಯಮಗಳೇಕೆ ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ನಾನು ಮಾಧ್ಯಮಗಳನ್ನು ಪ್ರಶ್ನಿಸಿದರೆ, ನನ್ನ ವಿರುದ್ಧವೇ ಹರಿಹಾಯುತ್ತಾರೆ. ಮೋದಿ ಅವರಿಗೆ ನಾನು ಕೇಳಬಯಸಿರುವ ಪ್ರಶ್ನೆಗಳನ್ನು ಮಾಧ್ಯಮಗಳು ಪ್ರಶ್ನಿಸುವ ಧೈರ್ಯ ಮಾಡುತ್ತವೆಯೇ..? ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಮೋದಿ ವಿರುದ್ಧ ಸ್ಪರ್ಧೆಗೆ ಸಿದ್ಧ
ಇದೇ ವೇಳೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ನರೇಂದ್ರ ಮೋದಿ ಅವರ ವಿರುದ್ದ ಆಪ್ ಪರವಾಗಿ ತಾವು ಸ್ಪರ್ಧಿಸಲು ಸಿದ್ಧ ಎಂದು ಕೇಜ್ರಿವಾಲ್ ಹೇಳಿದರು.
ಆಮ್ ಆದ್ಮಿ ಪಕ್ಷದ ಇಂದಿನ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


