ಡಿಎಂಕೆ ಇಬ್ಭಾಗ, ಹೊಸ ಪಕ್ಷ ಸ್ಥಾಪನೆಯತ್ತ ಅಳಗಿರಿ ಚಿತ್ತ..?

ಮಧುರೈ: ಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಮತ್ತು ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ ಅಳಗಿರಿ ಅವರು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಕುರಿತು ಚಿಂತನೆ ನಡೆಸಿದ್ದಾರೆ.
ಮಧುರೈನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಅಳಗಿರಿ ಅವರು ನೂತನ ಪಕ್ಷ ಸ್ಥಾಪಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಳಗಿರಿ ಅವರ ಈ ಸಭೆಯಲ್ಲಿ ಅವರ ಬೆಂಬಲಿಗರು ನೂತನ ಪಕ್ಷ ಸ್ಥಾಪನೆಗೆ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅಚ್ಚರಿಯ ವಿಷಯವೆಂದರೆ ಇತ್ತ ಸಭೆ ನಡೆಯುತ್ತಿದ್ದರೆ ಅತ್ತ ಅಳಗಿರಿ ಬೆಂಬಲಿಗರು ಮಧುರೈ ನಗರದಲ್ಲಿ ಈಗಾಗಲೇ 'ಕಲೈನರ್ ಡಿಎಂಕೆ' ಹೆಸರಿನ ಪೋಸ್ಟರ್ಗಳು ಮತ್ತು ಬಾವುಟಗಳನ್ನು ಪ್ರದರ್ಶಿಸುತ್ತಿದ್ದಾರೆ.
ಪೋಸ್ಟರ್ನಲ್ಲಿ 'ಕಲೈನರ್ ಡಿಎಂಕೆ ಪಕ್ಷ ಸಮರಕ್ಕೆ ಸಿದ್ಧವಾಗಿದ್ದು, ಪಕ್ಷದ ಚಿನ್ಹೆ ಮತ್ತು ಬಾವುಟ ತಯಾರಾಗಿದೆ. ಬನ್ನಿ ಲೋಕಸಭಾ ಚುನಾವಣೆಯನ್ನು ಎದುರಿಸೋಣ' ಎನ್ನುವ ಅಡಿ ಬರಹವನ್ನು ಹಾಕಲಾಗಿದೆ.
ಈ ಹಿಂದೆ ಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಅಳಗಿರಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಸುಳಿದಾಡಿದ್ದವು. ಆದರೆ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 'ತಾವು ಯಾವುದೇ ಪಕ್ಷವನ್ನು ಸೇರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದರು. ಅಂತೆಯೇ ನೂತನ ಪಕ್ಷ ಸ್ಥಾಪನೆಯ ಕುರಿತು ಕೇಳಿದಾಗ 'ಬೆಂಬಲಿಗರ ಸಭೆ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ' ಎಂದಷ್ಟೇ ಹೇಳಿದ್ದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಹಿರಿಯ ಪುತ್ರರಾಗಿರುವ ಅಳಗಿರಿ ಅವರು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಕಳೆದ ಜನವರಿಯಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಕರುಣಾನಿಧಿ ಅವರ ವಾರಸುದಾರ ಎಂದೇ ಬಿಂಬಿತರಾಗಿದ್ದ ತಮ್ಮ ಸಹೋದರ ಎಂ.ಕೆ.ಸ್ಟಾಲಿನ್ ಅವರಿಗೆ ಜೀವ ಬೆದರಿಕೆ ಒಡ್ಡಿದ್ದ ಅಳಗಿರಿ ಅವರು ಕರುಣಾನಿಧಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆಳವಣಿಗೆಯ ನಂತರ ಸುದ್ದಿಗೋಷ್ಠಿ ನಡೆಸಿದ್ದ ಕರುಣಾನಿಧಿ ಅವರು ತಮ್ಮ ಮಗ ಅಳಗಿರಿ ಅವರನ್ನು ಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


