ಮಲೇಷ್ಯಾ ವಿಮಾನ ನಾಪತ್ತೆ ಹಿಂದೆ ತಾಲಿಬಾನ್ ಉಗ್ರರ ಕೈವಾಡ?

ನ್ಯೂಯಾರ್ಕ್: ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣದ ಹಿಂದೆ ತಾಲಿಬಾನ್ ಭಯೋತ್ಪಾದಕರ ಕೈವಾಡವಿರುವ ಕುರಿತು ಅಮೆರಿಕ ಬಲವಾದ ಶಂಕೆ ವ್ಯಕ್ತಪಡಿಸಿದೆ.
ಕಳೆದ 10 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಎಂ.ಹೆಚ್.370 ವಿಮಾನ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿರುವ ಆಫ್ಗಾನಿಸ್ತಾನ ಗಡಿಯಿಂದ ಕೊನೆಯ ಬಾರಿ ಸಂದೇಶ ರವಾನಿಸಿದೆ. ಅಲ್ಲದೆ ಆಫ್ಗಾನಿಸ್ತಾನ ಗಡಿಯಲ್ಲಿ ವಿಮಾನ ನಿಯಂತ್ರಣ ಕಡಿದುಕೊಂಡ ಕುರಿತು ಅಮೆರಿಕದ ರಾಡಾರ್ ಪತ್ತೆ ಹಚ್ಚಿದೆ.
ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿರುವ ಎಫ್ಬಿಐ ಅಧಿಕಾರಿಗಳು ವಿಮಾನ ನಾಪತ್ತೆ ಹಿಂದೆ ಉಗ್ರರ ಕೈವಾಡವಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ತಾಲಿಬಾನ್ ಮೂಲದ ಉಗ್ರರಿಂದಲೇ ವಿಮಾನ ಹೈಜಾಕ್ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಸೇರಿದಂತೆ 227 ಮಂದಿ ಪ್ರಯಾಣಿಕರಲ್ಲಿ ಭಯೋತ್ದಾದಕರ ಸಂಪರ್ಕ ಹೊಂದಿದ್ದವರು ಕೂಡ ಇದ್ದರು ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ ತಮಗೆ ಮಲೇಷ್ಯಾ ಸರ್ಕಾರ ಅನುಮತಿ ನೀಡಿದರೆ ತಾವು ಈ ಬಗ್ಗೆ ತನಿಖೆ ನಡೆಸುವುದಾಗಿ ಎಫ್ಬಿಐ ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ಬೃಹತ್ ಮಾಹಿತಿದಾರರಿಂದ ನಾವು ಗಳಿಸಿರುವ ಮಾಹಿತಿ ಆಧಾರ ಮೇಲೆ ವಿಮಾನವನ್ನು ಭಯೋತ್ಪದಕರು ಅಪಹರಿಸಿರುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ನಮಗೆ ಸಂಪೂರ್ಣ ಅಧಿಕಾರವಿಲ್ಲ. ಮಲೇಷ್ಯಾ ಸರ್ಕಾರ ನಮಗೆ ಅಧಿಕಾರ ನೀಡಿದರೆ ಪ್ರಕರಣದ ಕುರಿತು ನಾವು ತನಿಖೆ ನಡೆಸುತ್ತೇವೆ ಎಂದು ಕೌಲಾಂಪುರದಲ್ಲಿರುವ ಎಫ್ಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಅಮೆರಿಕದ ಆರೋಪವನ್ನು ತಳ್ಳಿಹಾಕಿರುವ ಮಲೇಷ್ಯಾ ಸರ್ಕಾರ, ಎಫ್ಬಿಐ ಅಧಿಕಾರಗಳ ಪ್ರಸ್ತಾಪವನ್ನು ತಿರಸ್ಕರಿಸಿದೆ.
ನಕಲಿ ಪಾಸ್ಪೋರ್ಟ್ ಬಳಸಿದ್ದ ಇರಾನಿ ಪ್ರಯಾಣಿಕರು
ಇದೇ ವೇಳೆ ಎಫ್ಬಿಐ ಹೊರ ಹಾಕಿರುವ ಮಾಹಿತಿಯಲ್ಲಿ ಇರಾನ್ ಮೂಲದ ಇಬ್ಬರು ಪ್ರಯಾಣಿಕರು ನಕಲಿ ಪಾಸ್ಪೋರ್ಟ್ ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿಯೇ ವಿಮಾನ ನಾಪತ್ತೆ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಎಫ್ಬಿಐ ವಾದಿಸಿದೆ. ಅಲ್ಲದೆ ಇದೇ ವಿಮಾನದಲ್ಲಿ ದಕ್ಷಿಣ ಏಷ್ಯಾದ ಮುಸ್ಲಿಂ ಪ್ರಯಾಣಿಕರು ಇದ್ದು, ಈ ಪೈಕಿ ಕೆಲ ವ್ಯಕ್ತಿಗಳು ಭಯೋತ್ಪಾದಕರ ಸಂಪರ್ಕ ಹೊಂದಿರಬಹುದು ಎಂದು ಎಫ್ಬಿಐ ಹೇಳಿದೆ.
ಪೈಲಟ್ ಕುಟುಂಬಸ್ಥರ ವಿಚಾರಣೆ
ವಿಮಾನ ನಾಪತ್ತೆ ವಿಚಾರವಾಗಿ ಅಂತಾರಾಷ್ಟ್ರೀಯ ಸಮುದಾಯದಿಂದ ಟೀಕೆಗೆ ಒಳಗಾಗಿರುವ ಮಲೇಷ್ಯಾ ಸರ್ಕಾರ ಈ ಬಗ್ಗೆ ತೀವ್ರ ತನಿಖೆ ನಡೆಸಲು ಮುಂದಾಗಿದೆ. ಹೀಗಾಗಿಯೇ ನಾಪತ್ತೆಯಾದ ಎಂ.ಹೆಚ್ 370 ಬೋಯಿಂಗ್ 777 ವಿಮಾನದ ಪೈಲಟ್ಗಳನ್ನು ಮಲೇಷ್ಯಾ ಸರ್ಕಾರ ಅನುಮಾನಿಸಿದೆ. ಹೀಗಾಗಿ ವಿಮಾನದ ಪೈಲಟ್ಗಳ ಸಂಬಂಧಿಕರನ್ನು ವಿಚಾರಣೆಗೊಳಪಡಿಸಲು ಮಲೇಷ್ಯಾ ಸರ್ಕಾರ ಮುಂದಾಗಿದೆ. ಪೈಲಟ್ಗಳ ಕುಟುಂಬಸ್ಥರನ್ನು ಮಲೇಷ್ಯ ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದು, ವಿಚಾರಣೆಗಾಗಿ ಸರ್ಕಾರದ ಅನುಮತಿಗಾಗಿ ಕಾದಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ವಿಮಾನದ ಪೈಲಟ್ಗಳು ಮತ್ತು ಪ್ರಯಾಣಿಕರ ಕುಟುಂಬದೊಂದಿಗೆ ತನಿಖಾ ಏಜೆನ್ಸಿಗಳು ನಿರಂತರ ಸಂಪರ್ಕದಲ್ಲಿದ್ದು, ಸತತ ಮಾಹಿತಿ ಪಡೆಯುತ್ತಿವೆ. ಇವಿಷ್ಟೇ ಅಲ್ಲದೆ ವಿಮಾನದ ಪೈಲಟ್ಗಳು ಓದಿದ ಕಾಲೇಜು ಮತ್ತು ಅವರ ಸಹಪಾಠಿಗಳನ್ನು ಸಹ ವಿಚಾರಣೆಗೊಳಪಡಿಸಲಾಗುತ್ತಿದೆ. ಒಟ್ಟಾರೆ ವಿಮಾನ ನಾಪತ್ತೆ ಪ್ರಕರಣದ ಕುರಿತು ಸಾಧ್ಯವಾಗುವ ಎಲ್ಲ ಅಂಶಗಳ ಕುರಿತು ತನಿಖಾ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.
ಕಳೆದ ಮಾರ್ಚ್ 8ರಂದು ಮಲೇಷ್ಯಾ ಏರ್ಲೈನ್ಸ್ಗೆ ಸೇರಿದ ಎಂ.ಹೆಚ್ 370 ವಿಮಾನ ಕೌಲಾಲಂಪುರದಿಂದ ಬೀಜಿಂಗ್ ನತ್ತ ಹೊರಟಿತ್ತು. ಟೇಕ್ ಆಫ್ ಆಗಿ 2 ಗಂಟೆಗಳ ನಂತರ ವಿಮಾನವು ನಿಲ್ದಾಣದ ಸಂಪರ್ಕ ಕಡಿತಗೊಂಡಿತ್ತು. ಕೊನೆಯ ಬಾರಿಗೆ ಮಲಕ್ಕಾದಲ್ಲಿ ವಿಮಾನದ ಸಂಪರ್ಕ ಸಾಧ್ಯವಾಗಿತ್ತು. ವಿಮಾನದಲ್ಲಿ 12 ಮಂದಿ ಸಿಬ್ಬಂದಿಗಳು ಮತ್ತು 227 ಜನ ಪ್ರಯಾಣಿಕರು ಸೇರಿದಂತೆ ಒಟ್ಟು 239 ಮಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


