'ಬೆಳ್ಳಿ' ಮೂಡಿತೋ ಕೋಳಿ ಕೂಗಿತೋ !!

ಮುಂಜಾನೆಯೇ ಕಂಠೀರವ ಸ್ಟುಡಿಯೋದಲ್ಲಿ ಸೂರ್ಯ ತನ್ನ ಪ್ರಖರ ಕಿರಣಗಳನ್ನು ಹೊರಸೂಸುತ್ತಿದ್ದ. ಕೆಲಸಗಾರರು, ಅಭಿಮಾನಿಗಳು ಉತ್ಸಾಹದಿಂದ ಆ ಬಿಸಿಲಲ್ಲೂ ಓಡಾಡುತ್ತಿದ್ದರು. ಸೂರ್ಯ ರಶ್ಮಿಗಳಲ್ಲದೆ ತಾರೆಗಳೂ ಅಲ್ಲಿ ನೆರೆದಿದ್ದವು, ಚಿತ್ರರಂಗದ ತಾರೆಗಳು. ಫ್ಯಾನ್ಸಿ ನೀಲಿ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬೆಳ್ಳಿ ಚಿತ್ರದ ನಾಯಕಿ ಕೃತಿ ಕರಬಂದ ಹಾಗೆಯೆ ವೇದಿಕೆ ಬಳಿ ನಡೆದು ಬರುತ್ತಿದ್ದರೆ ಸುಡುತ್ತಿದ್ದ ರಣಬಿಸಿಲಲ್ಲಿ ಎದೆಯ ಮೇಲೆ ತಣ್ಣನೆ ಐಸಿಟ್ಟ ಭಾವ. ಇನ್ನೊಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಭೇಟಿ ಮಾಡಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾತರದಿಂದ ಕಾದಿದ್ದರು. ಇವಿಷ್ಟು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದ ಮುಸ್ಸಂಜೆ ಮಾತು ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶಿಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಬೆಳ್ಳಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳು. ಚಿತ್ರದ ಮೊದಲ ಶಾಟ್ ಗೆ ಕ್ಲಾಪ್ ಮಾಡಲು ಬಂದಿದ್ದವರು ಪುನೀತ್ ರಾಜ್ ಕುಮಾರ್. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಹಾಜರಿದ್ದರು. ಚಿತ್ರದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್ ಚಿತ್ರದ ಕತೆಯಲ್ಲಿ ಎರಡು ಶೇಡ್ ಇದ್ದು ಲವಲವಿಕೆಯಿದೆ, ಒಂದೊಳ್ಳೆ ಆಶಯವಿದೆ, ಚಿತ್ರಮಂದಿರದಲ್ಲಿ ಚಿತ್ರ ನೋಡಿದಾಗ ನಿಮಗೇ ಗೊತ್ತಾಗಲಿದೆಯೆಂದರು. ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿನ ವಿವಾದಗಳ ಬಗ್ಗೆ ಮಾತನಾಡುತ್ತ ತಮಗೂ ಕೋಪ ಬರುತ್ತೆ ಆದರೆ ಯಾರ ಮೇಲೂ, ಯಾವ ಬಣದ ಮೇಲೂ ಧ್ವೇಷವಿಲ್ಲ, ತಪ್ಪು ಯಾರ ಕಡೆಯಿಂದಾಗಿದ್ದರೂ ತಿದ್ದಿಕೊಳ್ಳಬೇಕು, ಮನಸ್ತಾಪಗಳನ್ನು ನ್ಯಾಯಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದರು. ನಾಯಕಿ ಕೃತಿ ತಮ್ಮ ಎಂಟನೆ ಚಿತ್ರದಲ್ಲಿ ಶಿವರಾಜ್ ಕುಮಾರ್ ರಂತಹ ಅನುಭವಿ ನಟನೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ತಮ್ಮ ಅದೃಷ್ಟ ಎಂದರು. ಚಿತ್ರದ ನಿರೂಪಣೆ ಬಹಳ ವಿಭಿನ್ನವಾಗಿದ್ದು, ಚಿತ್ರಕ್ಕೆ ಕತೆ-ಚಿತ್ರಕತೆ-ಸಂಭಾಷಣೆ ರಚಿಸಿರುವುದಲ್ಲದೆ ನಿರ್ದೇಶನದ ಹೊಣೆಯನ್ನೂ ಹೊತ್ತುಕೊಂಡಿರುವ ಮಹೇಶ್ ರ ಪ್ರತಿಭೆಯನ್ನು ಪ್ರಶಂಸಿಸಿದರು. ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್ ಮತ್ತು ವೆಂಕಟೇಶ್, ನಾಯಕನ ಜೊತೆಗೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಇತರ ನಾಲ್ವರು. ಚಿತ್ರಕ್ಕೆ ಸಂಗೀತ ನೀಡುತ್ತಿರುವವರು ಮುಸ್ಸಂಜೆ ಮಾತಿಗೂ ಸಂಗೀತ ನೀಡಿದ್ದ ವಿ. ಶ್ರೀಧರ್. ಸಹ ನಿರ್ಮಾಪಕ ಕೆ.ಜೆ ರಾಜಶೇಖರ್, ಕಾರ್ಯಕಾರಿ ನಿರ್ಮಾಪಕ ಅರವಿಂದ್ ರಾವ್ ಚಿತ್ರದ ಯಶಸ್ಸಿಗೆ ಸಹಕಾರ ಕೋರಿದರು. ಹೊಳೆನರಸೀಪುರದ ಹೆಚ್ ಆರ್ ರಾಜೇಶ್ 'ಬೆಳ್ಳಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದು ಅವರ ಪಯಣ ಯಶಸ್ವಿಯಾಗಿರಲಿ ಎಂದು 'ಕನ್ನಡಪ್ರಭ ಡಾಟ್ ಕಾಂ' ಹಾರೈಸುತ್ತದೆ.
- ಹರ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


