ವಿಮಾನದ ದಾಖಲೆ ನಾಶಪಡಿಸಿದ ಪೈಲಟ್: ಮಲೇಷ್ಯಾ ಸರ್ಕಾರ

ಕೌಲಾಲಂಪುರ: ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿರುವ ಎಂ.ಹೆಚ್ 370 ವಿಮಾನದ ಕುರಿತ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಪೈಲಟ್ ನಾಶಪಡಿಸಿದ್ದಾನೆ ಎಂದು ಮಲೇಷ್ಯಾ ಸರ್ಕಾರ ಹೇಳಿದೆ.
ಕೌಲಾಲಂಪುರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಲೇಷ್ಯಾ ರಕ್ಷಣಾ ಸಚಿವ ಹಿಷಾಮುದ್ದೀನ್ ಹುಸ್ಸೇನ್ ಅವರು, ಪೈಲಟ್ ಮನೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪೈಲಟ್ ಕ್ಯಾ.ಜಹಾರಿ ಅಹ್ಮದ್ ಶಾ ನ ಕಂಪ್ಯೂಟರ್ನಲ್ಲಿದ್ದ ವಿಮಾನದ ಕುರಿತ ಮಾಹಿತಿಗಳನ್ನು ಆತ ನಾಶಪಡಿಸಿದ್ದಾನೆ ಎಂದು ಹೇಳಿದರು. ಅಂತೆಯೇ ಕ್ಯಾ.ಜಹಾರಿ ಅಹ್ಮದ್ ಶಾ ಅಮಾಯಕ ಎಂದು ಕರೆದಿರುವ ಅವರು.
, ಆತನ ತಪ್ಪು ಸಾಬೀತಾಗುವವರೆಗೂ ಆತ ಅಮಾಯಕ ಎಂದು ಹೇಳಿದ್ದಾರೆ.
ಪ್ರಸ್ತುತ ನಾಪತ್ತೆ ವಿಮಾನದ ಕುರಿತು ತನಿಖೆ ನಡೆಸುತ್ತಿರುವ ಮಲೇಷ್ಯಾ ತನಿಖಾಧಿಕಾರಿಗಳು ನಾಶವಾಗಿರುವ ದಾಖಲೆಗಳನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಅಳಿಸಿಹೋಗಿರುವ ದಾಖಲೆಗಳು ದೊರೆತರೆ ಅವುಗಳಿಂದ ವಿಮಾನ ಪತ್ತೆ ಕಾರ್ಯಾಚರಣೆಗೆ ಸಹಕಾರಿಯಾಗಬಹುದು ಎನ್ನಲಾಗುತ್ತಿದೆ.
ದಕ್ಷಿಣ ಹಿಂದೂ ಮಹಾ ಸಾಗರದಲ್ಲಿ ಎಂಹೆಚ್ 370..?
ಮಲೇಷ್ಯಾ ಏರಲೈನ್ಸ್ನ ಎಂ.ಹೆಚ್.370 ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಮುಳುಗಿರಬಹುದು ಎಂದು ಕಾರ್ಯಾಚರಣೆ ನಡೆಸುತ್ತಿರುವ ತನಿಖಾದಳಗಳು ಶಂಕೆ ವ್ಯಕ್ತಪಡಿಸಿವೆ.
ವಿಮಾನ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪ್ರಮುಖ ತನಿಖಾ ತಂಡವೊಂದು, ನಾಪತ್ತೆಯಾಗಿರುವ ಮಲೇಷ್ಯನ್ ವಿಮಾನ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಮುಳುಗಿರಬಹುದು ಎಂದು ಪ್ರಬಲ ಶಂಕೆ ವ್ಯಕ್ತಪಡಿಸಿದೆ. ವಿಮಾನ ನಾಪತ್ತೆ ಪ್ರಕರಣದಲ್ಲಿ ಈವರೆಗೂ ಸಂಗ್ರಹಿಸಲಾಗಿರುವ ಮಾಹಿತಿಗಳ ಪೈಕಿ ಹಲವು ದಾಖಲೆಗಳು ವಿಮಾನವು ದಕ್ಷಿಣ ಹಿಂದೂ ಮಹಾಸಾಗರದ ಬಳಿಯಲ್ಲಿಯೇ ದುರಂತಕ್ಕೀಡಾಗಿರುವ ಕುರಿತು ಮಾಹಿತಿ ನೀಡುತ್ತಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಆದರೆ ಈ ಬಗ್ಗೆ ಖಚಿತ ಮಾಹಿತಿಗಳು ದೊರೆತಿಲ್ಲ ಎನ್ನುತ್ತಿರುವ ತನಿಖಾ ತಂಡ, ತಮಗೆ ಮತ್ತಷ್ಟು ಮಾಹಿತಿಯ ಅಗತ್ಯವಿದೆ ಎಂದು ಹೇಳಿದೆ. ವಿಮಾನ ಪತ್ತೆಗಾಗಿ ಈಗಾಗಲೇ ವಿಶ್ವಾದ್ಯಂತ ಸುಮಾರು 26 ರಾಷ್ಟ್ರಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಪೈಕಿ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಪ್ರಮುಖ ಕಾರ್ಯಾಚರಣೆಯ ವ್ಯಾಪ್ತಿ ಪ್ರದೇಶಗಳೆಂದು ಗುರುತಿಸಲಾಗಿದೆ. ಅದರಲ್ಲಿ ದಕ್ಷಿಣ ಹಿಂದೂ ಮಹಾ ಸಾಗರ ಕೂಡ ಸೇರಿದೆ. ಮತ್ತೊಂದು ವಲಯವೆಂದರೆ ಪಶ್ಚಿಮ ಇಂಡೋನೇಷ್ಯಾದಿಂದ ಪಶ್ಚಿಮ ಆಸ್ಟ್ರೇಲಿಯಾ ವಲಯ.
ಮಾಲ್ಡೀವ್ಸ್ ನಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ಮಾಡಿದ್ದ ವಿಮಾನ?
ಇದೇ ವೇಳೆ ತನಿಖಾ ತಂಡಗಳು ಹೊರಹಾಕಿರುವ ಮಾಹಿತಿಯನ್ವಯ ಮಲೇಷ್ಯಾ ವಿಮಾನ ನಾಪತ್ತೆಯಾದ ದಿನವೇ ಅಂದರೆ ಮಾರ್ಚ್ 8ರಂದು ಬೆಳಗ್ಗೆ ಸುಮಾರು 6.15ರಲ್ಲಿ ವಿಮಾನವೊಂದು ಅತ್ಯಂತ ಕೆಳಮಟ್ಟದಲ್ಲಿ ಭಾರಿ ಶಬ್ದದೊಂದಿಗೆ ಇಳಿಮುಖವಾಗಿ ಹಾರಾಟ ಮಾಡುತ್ತಿತ್ತು ಎಂದು ಮಾಲ್ಡೀವ್ಸ್ನ ಕುದಹುವಾಡೂ ದ್ವೀಪದ ನಿವಾಸಿಗಳು ತಿಳಿಸಿದ್ದಾರೆ.
ದಾರಿ ತಪ್ಪಿದ ವಿಮಾನದ ಸಿಗ್ನಲ್ ಪತ್ತೆ ಮಾಡಿದ್ದ ಥಾಯ್ ರಾಡಾರ್
ವಿಮಾನವೊಂದು ದಾರಿ ತಪ್ಪಿ ಬೇರೆ ದಿಕ್ಕಿನತ್ತ ಹಾರಾಟ ಮಾಡುತ್ತಿರುವ ಕುರಿತು ಥಾಯ್ಲ್ಯಾಂಡ್ ಮಿಲಿಟರಿ ರಾಡಾರ್ ಪತ್ತೆ ಮಾಡಿದ್ದ ವಿಚಾರ ಇದೀಗ ಬಹಿರಂಗವಾಗಿದೆ. ವಿಮಾನ ದಿಕ್ಕು ಬದಲಿಸಿದ ಕುರಿತು ಥಾಯ್ ಲ್ಯಾಂಡ್ ರಾಡಾರ್ ಎಚ್ಚರಿಕೆ ರವಾನಿಸಿತ್ತು. ಆದರೆ ಅಂದು ಮಿಲಿಟರಿ ಅಧಿಕಾರಿಗಳು ಈ ವಿಚಾರವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ವಿಮಾನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿರುವ ಥಾಯ್ ಲ್ಯಾಂಡ್ ಹೇಳಿದೆ.
ಒಟ್ಟಾರೆ ಕಳೆದ 11 ದಿನಗಳ ಹಿಂದೆ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಪ್ರಕರಣ ದಿನಗಳೆದಂತೆ ಗೊಂದಲದ ಗೂಡಾಗುತ್ತಿದೆ. ವಿಶ್ವಾದ್ಯಂತ 26 ರಾಷ್ಟ್ರಗಳು ಒಗ್ಗೂಡಿ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರೂ ವಿಮಾನದ ಕುರಿತು ಒಂದಿಷ್ಟೂ ಮಾಹಿತಿಗಳು ದೊರೆಯದೇ ಇರುವುದು ಪ್ರಯಾಣಿಕರ ಸಂಬಂಧಿಗಳಲ್ಲಿ ಆತಂಕ ಹೆಚ್ಚಿಸಿದೆ. ಅಂತೆಯೇ ಒಂದು ವೇಳೆ ವಿಮಾನ ಪತ್ತೆಯಾಗದಿದ್ದರೆ ಮುಂದಿನ ಗತಿ ಏನು..? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


