ಆಡ್ವಾಣಿ ಅವರೇ ತಮ್ಮ ಕ್ಷೇತ್ರ ಆಯ್ಕೆ ಮಾಡಬಹುದು: ರಾಜನಾಥ್ ಸಿಂಗ್

ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅವರು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅವರೇ ಆಯ್ಕೆ ಮಾಡಿಕೊಳ್ಳಬಹುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆಡ್ವಾಣಿ ಟಿಕೆಟ್ ವಿವಾದ ಕುರಿತು ಇದೀಗ ರಾಜನಾಥ್ ಸಿಂಗ್ ಅವರು ಬಹಿರಂಗ ಹೇಳಿಕೆ ನೀಡಿದ್ದು, ಆಡ್ವಾಣಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿಚ್ಛಿಸುತ್ತಾರೆಯೋ ಅಲ್ಲಿಯೇ ಅವರು ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದ್ದ ಆಡ್ವಾಣಿ ಟಿಕೆಟ್ ವಿಚಾರ ಇದೀಗ ಆರ್ಎಸ್ಎಸ್ ಮಧ್ಯ ಪ್ರವೇಶದೊಂದಿಗೆ ತಿಳಿಯಾಗುತಿದೆ. ಈ ಹಿಂದೆ ಪಕ್ಷದ ಹಿರಿಯ ಮುಖಂಡ ಆಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಹೇಳಿದ್ದ ಬಿಜೆಪಿ ಹೈಕಮಾಂಡ್, ಇದೀಗ ಆಡ್ವಾಣಿ ಅವರ ತೀವ್ರ ವಿರೋಧದಿಂದಾಗಿ ಮೆತ್ತಗಾಗಿದೆ.
ಈ ಬಗ್ಗೆ ನವದೆಹಲಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಎಲ್.ಕೆ.ಆಡ್ವಾಣಿ ಅವರು ತಮಗಿಷ್ಟವಾದ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಆಡ್ವಾಣಿ ಅವರ ಮನವೊಲಿಸಲು ಸ್ವತಃ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಆಡ್ವಾಣಿ ನಿವಾಸಕ್ಕೆ ಧಾವಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಈ ಬಗ್ಗೆ ಮಧ್ಯ ಪ್ರವೇಶ ಮಾಡಿದ್ದ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು, 'ಎಲ್ಲರೂ ಒಗ್ಗೂಡಿ ವಿವಾದವನ್ನು ಬಗೆಹರಿಸು'ವಂತೆ ನಿರ್ದೇಶನ ನೀಡಿದ್ದರು. ಹೀಗಾಗಿ ಆಡ್ವಾಣಿ ಅವರ ವಿರೋಧಕ್ಕೆ ಮಣಿದಿರುವ ಬಿಜೆಪಿ, ಅವರ ಕ್ಷೇತ್ರವನ್ನು ಬದಲಿಸಲು ಪರೋಕ್ಷ ಒಪ್ಪಿಗೆ ಸೂಚಿಸಿದೆ.
ತಮ್ಮ ಮತ್ತು ನರೇಂದ್ರ ಮೋದಿ ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಆಡ್ವಾಣಿ ಐದು ಬಾರಿ ಪ್ರತಿನಿಧಿಸಿದ್ದ ಗುಜರಾತ್ನ ಗಾಂಧಿನಗರ ಕ್ಷೇತ್ರವನ್ನು ಬದಲಿಸಲು ನಿರ್ಧರಿಸಿದ್ದರು. ತಮ್ಮ ನೂತನ ಕ್ಷೇತ್ರವಾಗಿ ಮಧ್ಯ ಪ್ರದೇಶದ ಭೋಪಾಲ್ ಅನ್ನು ಆಡ್ವಾಣಿ ಅವರು ಆಯ್ಕೆ ಮಾಡಿಕೊಂಡಿದ್ದರು. ಆದರೆ ಆಡ್ವಾಣಿ ಅವರ ನಿರ್ಧಾರಕ್ಕೆ ಮನ್ನಣೆ ನೀಡದ ಬಿಜೆಪಿ ಹೈಕಮಾಂಡ್, ಆಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಅವರ ಮನವೊಲಿಸಲು ಮುಂದಾಗಿತ್ತು.
ಆಡ್ವಾಣಿಯನ್ನು ಬಿಜೆಪಿ ಕಡೆಗಣಿಸಿಲ್ಲ
ಇದೇ ವೇಳೆ ಆಡ್ವಾಣಿ ಅವರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್ ಅವರು, ಆಡ್ವಾಣಿ ಅವರು ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ. ಅವರನ್ನು ಕಡೆಗಣಿಸುವ ಅಥವಾ ಅವರ ನಿರ್ಧಾರ, ಸಲಹೆ, ಸೂಚನೆಗಳನ್ನು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


