ವಿಮಾನದಲ್ಲೇ ಹೋಳಿ ಆಚರಣೆ: ಷೋಕಾಸ್ ನೋಟಿಸ್ ಜಾರಿ

ನವದೆಹಲಿ: ವಿಮಾನದಲ್ಲೇ ಹೋಳಿ ಹಬ್ಬದ ಆಚರಣೆ ಮಾಡಿದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಕೆಂಗಣ್ಣು ಬೀರಿರುವ ನಾಗರೀಕ ವಿಮಾನಯಾನ ನಿರ್ದೇಶನಾಲಯ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಳೆದ ಸೋಮವಾರ ನಡೆದಿದ್ದ ಈ ಘಟನೆ ಕುರಿತು ವಿವರ ನೀಡುವಂತೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ಸಿಬ್ಬಂದಿಗಳ ವರ್ತನೆಯನ್ನು ಆಕ್ಷೇಪಾರ್ಹ ವರ್ತನೆ ಎಂದು ಹೇಳಿದೆ. ಡಿಜಿಸಿಎಯಿಂದ ಖಂಡನೆಗೆ ಗುರಿಯಾಗಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಇದೀಗ ತನ್ನ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದು, ವಿಮಾನದ ಇಬ್ಬರು ಪೈಲಟ್ಗಳನ್ನು ಅಮಾನತುಗೊಳಿಸಿದೆ.
ಕಳೆದ ಸೋಮವಾರ ಸ್ಪೈಸ್ ಜೆಟ್ ವಿಮಾನದ ಸಿಬ್ಬಂದಿಗಳು ಪ್ರಯಾಣದ ಸಮಯದಲ್ಲಿ ನೃತ್ಯ ಮಾಡುವ ಮೂಲಕ ಹೋಳಿ ಹಬ್ಬದ ಆಚರಣೆ ಮಾಡಿದ್ದರು. ಈ ವೇಳೆ ಕೆಲ ಪ್ರಯಾಣಿಕರು ಕೂಡ ಸಿಬ್ಬಂದಿಗಳೊಂದಿಗೆ ಕೂಡಿ ಹೆಜ್ಜೆ ಹಾಕಿದ್ದರು. ಈ ಘಟನೆಯನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ದಾಖಲಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದು, ಈ ದೃಶ್ಯಾವಳಿ ಕುರಿತು ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮೊದಲ ದೃಶ್ಯಾವಳಿಯಲ್ಲಿ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಕೂಡಿ ಹೆಜ್ಜೆ ಹಾಕುತ್ತಿರುವುದು ಕಂಡು ಬಂದರೆ, ಎರಡನೇ ದೃಶ್ಯಾವಳಿಯಲ್ಲಿ ಕಾಕ್ಪೀಟ್ನಲ್ಲಿದ್ದ ಓರ್ವ ಪೈಲಟ್ ಹೊರಬಂದು ಫೋಟೊ ತೆಗೆಯುತ್ತಿದ್ದನು. ಇದೇ ಇದೀಗ ಡಿಜಿಸಿಎ ಕೆಂಗಣ್ಣಿಗೆ ಕಾರಣವಾಗಿದ್ದು, ಸ್ಪೈಸ್ ಜೆಟ್ ಸಂಸ್ಥೆ ವಿರುದ್ಧ ಡಿಜಿಸಿಎ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಆದರೆ ಡಿಜಿಸಿಎ ನೋಟಿಸ್ ಕುರಿತು ಮಾತನಾಡಿರುವ ಸ್ಪೈಸ್ ಜೆಟ್ ಸಂಸ್ಥೆ, ಪ್ರಯಾಣಿಕರನ್ನು ಸೆಳೆಯುವ ಸಲುವಾಗಿ ವಿಮಾನದಲ್ಲಿಯೇ ಹೋಳಿ ಆಚರಣೆಗೆ ಅವಕಾಶ ನೀಡಿದ್ದೆವು. ಇದಕ್ಕಾಗಿ ನಾವು ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ವಿಮಾನದಲ್ಲಿ ಆಯೋಜಿಸಿದ್ದೆವು. ಅಲ್ಲದೆ ನೃತ್ಯ ಕಾರ್ಯಕ್ರಮಕ್ಕಾಗಿಯೇ ವೃತ್ತಿಪರ ನೃತ್ಯಗಾರರನ್ನು ನೇಮಿಸಿದ್ದೆವು ಎಂದು ಹೇಳಿದೆ.
ಅಂತೆಯೇ ತನ್ನ ಪೈಲಟ್ಗಳನ್ನು ಅಮಾನತುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆ, ಡಿಜಿಸಿಎ ನಿಯಮಾವಳಿಗಳ ಪ್ರಕಾರ ಕಾಕ್ಪೀಟ್ನಲ್ಲಿ ಪೈಲಟ್ಗಳ ಉಪಸ್ಥಿತಿ ಕಡ್ಡಾಯ. ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಂದರೆ ಶೌಚಾಲಯಕ್ಕೆ ತೆರಳುವಾಗ ಮಾತ್ರ ಓರ್ವ ಪೈಲಟ್ ಹೊರ ಬರಬಹುದು. ಆದರೆ ಅಂದು ಪೈಲಟ್ಗಳು ತಮ್ಮ ಕರ್ತವ್ಯವನ್ನು ಮರೆತಿದ್ದರು. ಹೀಗಾಗಿಯೇ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


