ಹಾವು ಕಚ್ಚಿ "ಸತ್ತಿದ್ದ" ವ್ಯಕ್ತಿ 11 ವರ್ಷಗಳ ಬಳಿಕ ವಾಪಸ್..!

ಪಾಟ್ನಾ: ಹಾವು ಕಚ್ಚಿ ಮೃತಪಟ್ಟಿದ್ದ ವ್ಯಕ್ತಿ 11 ವರ್ಷಗಳ ಬಳಿಕ ಮನೆಗೆ ವಾಪಸಾಗಿರುವ ಘಟನೆ ಉತ್ತರ ಪ್ರದೇಶದ ಭದ್ವಾ ಗ್ರಾಮದಲ್ಲಿ ನಡೆದಿದ್ದು, ಆದರೆ ಅದಾಗಲೇ ಆತನ ಪತ್ನಿ ಆತನ ತಮ್ಮನನ್ನು ಮಧುವೆಯಾಗಿ ಸಂಸಾರ ನಡೆಸುತ್ತಿದ್ದಾಳೆ.
11 ವರ್ಷಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಛತ್ರಪಾಲ್ ಎಂಬಾತ ಹಾವು ಕಡಿತದಿಂದಾಗಿ ಕುಸಿದು ಬಿದಿದ್ದ. ಹಾವು ಕಡಿತದಿಂದ ಮೂರ್ಛೆ ಹೋಗಿದ್ದ ಆತನನ್ನು ಮೃತಪಟ್ಟಿದ್ದಾನೆ ಎಂದು ಭಾವಿಸಿದ ಸ್ಥಳೀಯರು ಮತ್ತು ಆತನ ಕುಟುಂಬಸ್ಥರು ಸ್ಥಳೀಯ ಧಾರ್ಮಿಕ ಆಚರಣೆಯಂತೆ ಆತನ ದೇಹವನ್ನು ನದಿಗೆ ಎಸೆದಿದ್ದಾರೆ. ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದೇಹವನ್ನು ಕಂಡ ಕೆಲ ಮೀನುಗಾರರು ಆತನನ್ನು ದಡಕ್ಕೆ ತಂದು ನಂತರ ಆತನಿಗೆ ಹಾವು ಕಚ್ಚಿರುವುದನ್ನು ಗಮನಿಸಿದ್ದಾರೆ. ನಂತರ ಹಾವಾಡಿಗರ ಸಹಾಯದಿಂದ ಆತನನ್ನು ಬದುಕಿಸಿದ್ದಾರೆ.
ಛತ್ರಪಾಲ್ನ ಸಾವಿನ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಛತ್ರಪಾಲ್ನ ಹೆಂಡತಿ ಊರ್ಮಿಳಾ ತೀರ ಚಿಕ್ಕವಯಸ್ಸಿನಲ್ಲಿಯೇ ವಿಧವೆಯಾಗಿದ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮದ ಹಿರಿಯರು, ಆಕೆಯನ್ನು ಛತ್ರಪಾಲ್ನ ಕಿರಿಯ ಸಹೋದರನಿಗೆ ಮದುವೆ ಮಾಡಿಕೊಡುತ್ತಾರೆ. ಬೇರೆ ವಿಧಿಯಿಲ್ಲದೆ ಊರ್ಮಿಳಾ ಕೂಡ ಆತನೊಂದಿಗೆ ಸಂಸಾರ ನಡೆಸುತ್ತಿರುತ್ತಾಳೆ.
ಈ ನಡುವೆ ಸಾವಿಗೀಡಾಗಿದ್ದ ಛತ್ರಪಾಲ್ ಸತತ 11 ವರ್ಷಗಳ ಬಳಿಕ ತನ್ನ ಗ್ರಾಮಕ್ಕೆ ಬಂದಾಗ ಇಡೀ ಗ್ರಾಮವೇ ಧಂಗಾಗುತ್ತದೆ. ಆದರೆ ಅದಾಗಲೇ ಊರ್ಮಿಳಾಗೆ ಛತ್ರಪಾಲ್ ಸಹೋದರನಿಂದಾಗಿ ಇಬ್ಬರು ಮಕ್ಕಳಾಗಿರುತ್ತದೆ. ಇದೀಗ ಯಾರನ್ನು ಊರ್ಮಿಳೆಯ ಪತಿಯಾಗಿ ತೀರ್ಮಾನಿಸಬೇಕು ಎಂಬ ದ್ವಂದ್ವಕ್ಕೆ ಸಿಲುಕಿದ್ದ ಗ್ರಾಮದ ಹಿರಿಯರು, ಊರ್ಮಿಳಾಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡುತ್ತಾರೆ.
ಆದರೆ ಊರ್ಮಿಳಾ ಕೂಡ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿ ಇಬ್ಬರು ಸಹೋದರರನ್ನೂ ತನ್ನ ಗಂಡಂದಿರಾಗಿ ಸ್ವೀಕರಿಸಲು ಮುಂದಾಗಿದ್ದಾಳೆ. ಆದರೆ ಊರ್ಮಿಳಾ ತೀರ್ಮಾನವನ್ನು ಛತ್ರಪಾಲ್ ಸಹೋದರರು ಸೇರಿದಂತೆ ಅವರ ಕುಟುಂಬಸ್ಥರು ಒಪ್ಪಿಕೊಳ್ಳಬೇಕಿದೆ. ಊರ್ಮಿಳಾ ನಿರ್ಧಾರವನ್ನು ಈಗಾಗಲೇ ಗ್ರಾಮದ ಹಿರಿಯರು ಒಪ್ಪಿದ್ದು, ಛತ್ರಪಾಲ್ ಕುಟುಂಬ ಸದಸ್ಯರು ಕೂಡ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಾರೆ ಹಾವು ಕಚ್ಚಿದ್ದ ವ್ಯಕ್ತಿ ಸತ್ತಿದ್ದಾನೆಯೋ ಇಲ್ಲವೋ ಎಂಬುದರ ಕುರಿತು ಪರೀಕ್ಷೆ ನಡೆಸದ ಗ್ರಾಮಸ್ಥರ ಮೂರ್ಖತನದಿಂದಾಗಿ ಮಹಿಳೆಯೊಬ್ಬಳು "ಆಧುನಿಕ ದ್ರೌಪದಿ"ಯಾಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


