ಜಸ್ವಂತ್ಗೆ ಬಿಜೆಪಿ ಟಿಕೆಟ್ ನಿರಾಕರಣೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ

ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ನಿವೃತ್ತ ಕರ್ನಲ್ ಸೋನಾ ರಾಮ್ ಚೌದರಿ ಅವರಿಗೆ ಬಾರ್ಮರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಈ ಹಿಂದೆ ತಮ್ಮ ಸ್ವಕ್ಷೇತ್ರವಾಗಿರುವ ಬಾರ್ಮರ್ ಕ್ಷೇತ್ರದಿಂದಲೇ ತಾವು ಸ್ಪರ್ಧಿಸುವುದಾಗಿ ಜಸ್ವಂತ್ ಸಿಂಗ್ ಅವರು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟಪಡಿಸಿದ್ದರು. ಅಲ್ಲದೆ ಒಂದು ವೇಳೆ ಬಾರ್ಮರ್ ಕ್ಷೇತ್ರದಿಂದ ತಮಗೆ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ಕೂಡ ನೀಡಿದ್ದರು. ಇದೀಗ ಜಸ್ವಂತ್ ಸಿಂಗ್ ಅವರ ಎಚ್ಚರಿಕೆಯ ಹೊರತಾಗಿಯೂ ಬಾರ್ಮರ್ ಕ್ಷೇತ್ರದಿಂದ ನಿವೃತ್ತ ಕರ್ನಲ್ ಸೋನಾ ರಾಮ್ ಚೌದರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಜಸ್ವಂತ್ ಸಿಂಗ್ ಗೆ ಟಿಕೆಟ್ ಕೈ ತಪ್ಪಲು ವಸುಂಧರಾ ರಾಜೇ ಕಾರಣ..?
ಬಿಜೆಪಿ ಪಕ್ಷದ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ಕೈತಪ್ಪಲು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೇ ಕಾರಣ ಎನ್ನಲಾಗುತ್ತಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜಸ್ತಾನದ ಮೇಲುಸ್ತುವಾರಿಯನ್ನು ಬಿಜೆಪಿ ಹೈಕಮಾಂಡ್ ವಸುಂಧರಾ ರಾಜೇ ಅವರಿಗೆ ನೀಡಿದ್ದು, ಅವರ ಶಿಫಾರಸ್ಸಿನ ಮೇರೆಗೆ ಜಸ್ವಂತ್ ಸಿಂಗ್ ಅವರ ಬಾರ್ಮರ್ ಕ್ಷೇತ್ರದಿಂದ ನಿವೃತ್ತ ಕರ್ನಲ್ ಸೋನಾ ರಾಮ್ ಚೌದರಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದ ಜಸ್ವಂತ್ ಸಿಂಗ್ ಅವರು, ತಮ್ಮ ಜನ್ಮಸ್ಥಳವಾದ ಬಾರ್ಮರ್ ಕ್ಷೇತ್ರದಿಂದಲೇ ತಾವು ತಮ್ಮ ಕೊನೆಯ ಚುನಾವಣೆಯನ್ನು ಎದುರಿಸುವುದಾಗಿ ಹೇಳಿದ್ದರು. ಆದರೆ ತಮಗೆ ಟಿಕೆಟ್ ಕೈ ತಪ್ಪುವ ಕುರಿತು ಈ ಹಿಂದೆಯೇ ಮಾಹಿತಿ ನೀಡಿದ್ದ ಜಸ್ವಂತ್ ಸಿಂಗ್ ಅವರು, ಈ ಕುರಿತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವಿರುದ್ಧ ಕಿಡಿಕಾರಿದ್ದರು. ಬಿಜೆಪಿಯಲ್ಲಿ ಹಿಂದಿನಂತೆ ಇಲ್ಲ. ಕೆಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜಸ್ವಂತ್ ಸಿಂಗ್ ಅವರು ಪರೋಕ್ಷವಾಗಿ ವಸುಂಧರಾ ರಾಜೇ ಅವರ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಇದೇ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ವಿರುದ್ಧವಾಗಿಯೂ ಅವರು ಗುಡುಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


