ಈಗಿನ ಸುದ್ದಿ

ನಟಿ ರಮ್ಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ: ವಿಜಯ ಪ್ರಸಾದ್

ನಟಿ ರಮ್ಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ: ವಿಜಯ ಪ್ರಸಾದ್
Published On :

'ನೀರ್ ದೋಸೆ' ಚಿತ್ರದಲ್ಲಿ ನಟಿ ರಮ್ಯ ಜಾಗದಲ್ಲಿ ರಾಗಿಣಿ ಅಭಿನಯಿಸುತ್ತಾರೆ ಎಂದು ಗಾಳಿಸುದ್ದಿ ಬಂದಾಗ ಚಿತ್ರದ ನಿರ್ದೇಶಕ ವಿಜಯಪ್ರಸಾದ್ ರನ್ನು ಸಂಪರ್ಕ ಮಾಡಿದೆವು. ಆದರೆ 'ನೀರ್ ದೋಸೆ' ಚಿತ್ರ ಪ್ರಕರಣ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನ್ಯಾಯಾಲಯದಲ್ಲಿ ಇರುವುದರಿಂದ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರೂ, ರಮ್ಯ ರಾಗಿಣಿ ಗೊಂದಲದ ವಿಚಾರವಾಗಿ ಮಾತ್ರ ಮನಬಿಚ್ಚಿ ಮಾತಾಡಿದ್ದಾರೆ. ಅವರ ಮಾತುಗಳಲ್ಲಿ ''ನೀರ್ ದೋಸೆ'ಯ ರಮ್ಯ ರಾಗಿಣಿಯ ಚಿತ್ರಣ ಹೀಗಿದೆ:
     ''ಇದುವರೆಗೆ ರಮ್ಯ ಅವರಿಗೋಸ್ಕರವೇ ''ನೀರ್ ದೋಸೆ' ಚಿತ್ರ ಕಾಯ್ತಿದೆ. 'ನೀರ್ ದೋಸೆ ಚಿತ್ರದ ವಿಚಾರ ವಾಣಿಜ್ಯ ಮಂಡಳಿಯಲ್ಲಿ ಇದ್ದರೂ, ರಮ್ಯ ಅವರು ಕೇಸು ಹಾಕಿದ್ದರೂ ಕೂಡಾ, ನಾವು  'ನೀರ್ ದೋಸೆ' ಚಿತ್ರಕ್ಕಾಗಿ ರಮ್ಯ ಅವರನ್ನೇ ಕಾಯುತ್ತಿದ್ದೇವೆ. ಅವರನ್ನು ಬಿಟ್ಟು 'ನೀರ್ ದೋಸೆ' ಚಿತ್ರದ ವಿಚಾರವಾಗಿ ಯಾವುದೇ ನಿರ್ಧಾರವನ್ನು ಹಾಗೇ ತಂಡದಿಂದ ಕೈಬಿಟ್ಟು ಮುನ್ನಡೆಯಬೇಕು ಅನ್ನುವ ಹಾಗಿದ್ದಿದ್ದರೆ ನಾವು ಇಷ್ಟು ತಿಂಗಳುಗಳ ಕಾಲ ಕಾಯುವುದೇ ಬೇಕಿರಲಿಲ್ಲ. ಯಾವತ್ತೋ ಅವರನ್ನು ಪಕ್ಕಕ್ಕಿಟ್ಟು ಇನ್ನೊಬ್ಬರನ್ನು ಹಾಕಿಕೊಂಡು ಸಿನೆಮಾ ಮಾಡ್ತಿದ್ವಿ. ಆದ್ದರಿಂದಲೇ 'ನೀರ್ ದೋಸೆ' ಯಿಂದ ಅವರನ್ನು ಕೈ ಬಿಡೋ ವಿಚಾರವೇ ಇಲ್ಲ. ಹಾಗಾಗಿ ಇವತ್ತಿಗೂ ಕೂಡಾ ಕಾಯ್ತಾನೇ ಇದೀವಿ. ಇಂಥಾ ಸಂದರ್ಭದಲ್ಲಿ ರಮ್ಯ ಅವರನ್ನು ಕೈಬಿಟ್ಟು ರಾಗಿಣಿಯವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ 'ನೀರ್ ದೋಸೆ' ತಂಡ ಚಿಂತನೆ ನಡೆಸುತ್ತಿದೆಯೆಂದು ಸುಳ್ಳುಸುದ್ದಿ ಹಬ್ಬಿರುವುದು ನಿಜಕ್ಕೂ ವಿಷಾದಕರ. ಇಂಥ ಒಂದು ಹೇಳಿಕೆಯನ್ನು ನಿರ್ದೇಶಕರಾಗಲಿ ನಿರ್ಮಾಪಕರಾಗಲಿ ಚರ್ಚೆಯೇ ಮಾಡಿಲ್ಲ. ಇದು ಒಂದು ಅಪ್ಪಟ ಸುಳ್ಳು ಸುದ್ದಿ. 'ನೀರ್ ದೋಸೆ'  ಚಿತ್ರದಲ್ಲಿ ರಮ್ಯ ಅವರೇ ಮುಂದುವರಿಯುತ್ತಾರೆ ವಿನಃ ಬೇರೆ ಯಾರೂ ಆ ಸ್ಥಾನವನ್ನು ತುಂಬಲಿಕ್ಕೆ ಸಾಧ್ಯವಿಲ್ಲ. ರಾಗಿಣಿಯವರ ವ್ಯಕ್ತಿತ್ವ, ಪ್ರತಿಭೆ ಮತ್ತು ವೃತ್ತಿಪರತೆಯ ಬಗ್ಗೆ ನನಗೆ ಗೌರವ ಮತ್ತು ಪ್ರೀತಿ ಇದ್ದು ಅನಾವಶ್ಯಕವಾಗಿ ಅವರ ಹೆಸರನ್ನು ಎಳೆ  ತಂದಿರುವುದಕ್ಕೆ ತಂಡವು ವಿಷಾದಿಸುತ್ತದೆ. ವೈಯಕ್ತಿಕವಾಗಿ ಭವಿಷ್ಯದಲ್ಲಿ ಸಮಯ ಕೂಡಿ ಬಂದಾಗ ರಾಗಿಣಿಯವರ ಜೊತೆ ಖಂಡಿತ ಕೆಲಸ ಮಾಡಲು ಇಚ್ಚಿಸುತ್ತೇನೆ.
ಕಡೆಯದಾಗಿ 'ನೀರ್ ದೋಸೆ'ಯಲ್ಲಿ ರಮ್ಯ ಅವರನ್ನೇ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು 'ನೀರ್ ದೋಸೆ' ತಂಡದ್ದು. ನನಗೆ ನಿರ್ದೇಶಕನಾಗಿ, 'ನೀರ್ ದೋಸೆ'ಯಲ್ಲಿ ರಮ್ಯ ಅವರೇ ಮುಂದುವರಿಯಬೇಕೆಂಬ ಹಂಬಲ ಮತ್ತು ದೃಢ ನಿರ್ಧಾರ. ಅದಕ್ಕೆ ಕಾರಣ ಅವರ ಪ್ರತಿಭೆ ಮತ್ತು ಸಹಕಾರ. 'ಸಿದ್ಲಿಂಗು'ವಿನಲ್ಲಿ ಕಥೆ, ಪಾತ್ರ ಮತ್ತು ನನ್ನ ಕೆಲಸವನ್ನು ಮೆಚ್ಚಿ ನನಗೆ ಬೆನ್ನೆಲುಬಾಗಿ ನಿಂತಿದ್ದ ರಮ್ಯ ಅವರಿಗೆ ನಾನು ಎಂದೆಂದೂ ಅಭಾರಿ.
'ನೀರ್ ದೋಸೆ'  ಕಥೆಯಲ್ಲಿನ ಜೀವಾಳ, ಪಾತ್ರದ ಗಟ್ಟಿತನ ಮತ್ತು ನಿರ್ದೇಶಕನ ದುಡಿತದ ಮೇಲಿನ ನಂಬಿಕೆಯ ಮೇಲೆ  ರಮ್ಯ ಅವರು ವೇಶ್ಯೆಯ  ಪಾತ್ರವನ್ನು ಮೊದಲ ಬಾರಿ 'ನೀರ್ ದೋಸೆ'  ಚಿತ್ರದ ಮುಖಾಂತರ ಸ್ವಾಗತ ಮಾಡಿದ್ದಾರೆ. ವೃತ್ತಿಪರತೆಯ ಅವರ ಈ ನಿರ್ಧಾರವನ್ನು ನಾನು ಕೂಡ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಆದರೆ ಒಂದಷ್ಟು ಕಾಣದ ಕೈಗಳ ಪಿತೂರಿ, ಸಂಚು, ಒಂದಷ್ಟು ತಪ್ಪು ತಿಳುವಳಿಕೆಗಳಿಂದ, ಸಂವಹನದ ಕೊರತೆ ಅಥವಾ ಅಂತರದಿಂದ ನನ್ನ ಮತ್ತು ರಮ್ಯ ಅವರ ಬಾಂಧವ್ಯಕ್ಕೆ ಧಕ್ಕೆಯಾಗಿರುವುದು ಕೂಡ ವಿಷಾದದ ಸಂಗತಿ. ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆಯನ್ನು ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಕೊಡಬಾರದೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚಿಸಿರುವುದರಿಂದ ಇದುವರೆಗೂ ಮೌನವಾಗಿರುವೆ. ಇನ್ನೂ ಮೌನವಾಗಿಯೆ ಇದ್ದೇನೆ. ಈಗಲೂ ನಾನು ಹೇಳುತ್ತಿರುವುದು ಇಷ್ಟೇ - ಮನಸ್ಸುಗಳನ್ನು ಸರಿಪಡಿಸಿಕೊಂಡು 'ನೀರ್ ದೋಸೆ' ಎಂಬ ಕನಸನ್ನು ಎತ್ತಿ ಹಿಡಿಯೋಣ. ಇದು ಇದು ನನ್ನ ಕೊರಿಕೆಯೇ ವಿನಹ ಯಾವುದೇ ಸೂಚನೆ, ಎಚ್ಚರಿಕೆ ಹಾಗೂ ಆಜ್ಞೆಯಾಗಲೀ ಅಲ್ಲವೇ ಅಲ್ಲ! ಹಾಗೊಂದು ವೇಳೆ ಅಚಾತುರ್ಯದಿಂದ ನಿಮಗೆ ನೋವಾಗಿದ್ದಲ್ಲಿ ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಈ ಕ್ಷಮೆಯ ಉದ್ದೇಶ ನನ್ನ ದೌರ್ಬಲ್ಯ, ಅಸಹಾಯಕತೆ ಅಥವಾ ಜಾಣತನವಲ್ಲ. ಇದು ನನ್ನ ಮನದಾಳದ ಮಾತು. ನನ್ನ ನೇರ ನುಡಿ,
ನೇರ ನಡೆ ನಿಮಗೆ ಚೆನ್ನಾಗಿ ತಿಳಿದಿದೆ, ದಯವಿಟ್ಟು ಬನ್ನಿ. ಕೈ ಜೋಡಿಸೋಣ, ಇದಕ್ಕಿಂತ ಹೆಚ್ಚಿಗೆ ಇನ್ನೇನೂ ಹೇಳಲಾರೆ...'

- ಡಾವೆಂಕಿ
ಕನ್ನಡಪ್ರಭ ಡಾಟ್ ಕಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.