ವಿಮಾನ ನಾಪತ್ತೆ: ಸಮುದ್ರದಲ್ಲಿ ಮರದ ಸಾಮಗ್ರಿ, ಬೆಲ್ಟ್ ಪತ್ತೆ

ಪರ್ತ್(ಆಸ್ಟ್ರೇಲಿಯಾ): ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ ಕುರಿತು ಶೋಧಕಾರ್ಯ ಮುಂದುವರೆದಿದ್ದು, ಆಸ್ಟ್ರೇಲಿಯಾ ಬಳಿ ಶೋಧ ನಡೆಸುತ್ತಿರುವ ತಂಡಕ್ಕೆ ಮರದ ಸಾಮಗ್ರಿ, ಬೆಲ್ಟ್ ಸೇರಿದಂತೆ ಕೆಲ ವಸ್ತುಗಳು ಲಭಿಸಿವೆ.
ಆಸ್ಟ್ರೇಲಿಯಾ ಬಳಿ ಶೋಧ ಕಾರ್ಯ ನಡೆಸುತ್ತಿರುವ ತಂಡ ಸಮುದ್ರದಲ್ಲಿ ವಿಮಾನ ಮತ್ತು ಹಡಗುಳಲ್ಲಿ ಬಳಸಲಾಗುವ ಮರದ ಸಾಮಾನು ಮತ್ತು ಬೆಲ್ಟ್ ಪತ್ತೆ ಮಾಡಿದ್ದು, ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ. ನಿನ್ನೆ ಚೀನಾ ಶೋಧ ತಂಡಕ್ಕೆ ವಿಮಾನದ ಬಿಡಿ ಭಾಗದ ಉಪಗ್ರಹ ಚಿತ್ರವೊಂದು ಲಭಿಸಿತ್ತು, ಲಭ್ಯವಾದ ಚಿತ್ರ ನಾಪತ್ತೆಯಾದ ವಿಮಾನದ ಅವಶೇಷದ್ದೇ ಎನ್ನುವ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇದೀಗ ಆಸ್ಟ್ರೇಲಿಯಾ ಬಳಿ ಪತ್ತೆಯಾಗಿರುವ ವಸ್ತುಗಳು ಮಲೇಷ್ಯಾ ವಿಮಾನದ್ದೇ ಅಥವಾ ಅದೇ ಮಾರ್ಗದಲ್ಲಿ ಸಂಚರಿಸಿರಬಹುದಾದ ಹಡಗಿನಿಂದ ಬಿದ್ದ ಅವಶೇಷವೇ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಂಬಾಟ್ ಕೂಡ ಶಂಕೆ ವ್ಯಕ್ತಪಡಿಸಿದ್ದು, 'ಶೋಧ ತಂಡಕ್ಕೆ ಸಮುದ್ರದಲ್ಲಿ ಕೆಲ ವಸ್ತುಗಳು ಪತ್ತೆಯಾಗಿರುವುದು ನಿಜ. ಆದರೆ ಆ ವಸ್ತುಗಳು ವಿಮಾನದ್ದೇ ಅಥವಾ ಹಡಗಿನದ್ದೇ ಎಂಬುದು ತಿಳಿದಿಲ್ಲ. ಸಂಪೂರ್ಣ ಮಾಹಿತಿ ಬಂದ ಬಳಿಕ ಆ ಬಗ್ಗೆ ವಿವರ ನೀಡುತ್ತೇನೆ ಎಂದು ಹೇಳಿದರು.
ವಿಮಾನ ಪತ್ತೆಗೆ ಮತ್ತಷ್ಟು ವಿಮಾನ ಮತ್ತು ಅತ್ಯಾಧುನಿಕ ಹಡಗುಗಳ ನಿಯೋಜನೆ
ಇದೇ ವೇಳೆ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಪತ್ತೆ ಕಾರ್ಯಾಚರಣೆಗೆ ಬಳಸಲಾಗುತ್ತಿರುವ ವಿಮಾನ ಮತ್ತು ಹಡಗುಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಆಸ್ಟ್ರೇಲಿಯಾ, ಅಮೆರಿಕ, ಚೀನಾ ಮತ್ತು ಭಾರತ ದೇಶಗಳು ಶೋಧಕಾರ್ಯಕ್ಕೆ ವಾಯುಸೇನೆ ಮತ್ತು ನೌಕದಳಗಳ ವಿಮಾನ ಮತ್ತು ಅತ್ಯಾಧುನಿಕ ಹಡಗುಗಳನ್ನು ನಿಯೋಜಿಸಿವೆ. ಅಂತೆಯೇ ವಿಮಾನ ಪತ್ತೆ ಕಾರ್ಯ ನಡೆಯುತ್ತಿರುವ ಸಮುದ್ರ ವ್ಯಾಪ್ತಿಯನ್ನು ಕೂಡ ವಿಸ್ತರಿಸಲಾಗಿದೆ. ಪ್ರಸ್ತುತ ಚೀನಾ ಮತ್ತು ಭಾರತ ದೇಶಗಳು ಶೋಧ ನಡೆಸುತ್ತಿರುವ ದಕ್ಷಿಣ ಹಿಂದೂ ಮಹಾಸಾಗರದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ.
ಒಟ್ಟಾರೆ ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯನ್ ವಿಮಾನಕ್ಕಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲಾ ಒಟ್ಟಾಗಿ ಸೇರಿ ಹುಡುಕಾಟ ನಡೆಸುತ್ತಿದ್ದರೂ ಒಂದಿಷ್ಟೂ ಮಾಹಿತಿ ಲಭಿಸದೇ ಇರುವುದು ತಂತ್ರಜ್ಞಾನಕ್ಕೆ ಒಡ್ಡುತ್ತಿರುವ ದೊಡ್ಡ ಸವಾಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


