ಈಗಿನ ಸುದ್ದಿ

ಬಿಜೆಪಿಯತ್ತ ಟಾಲಿವುಡ್ ಹೀರೋ ನಾಗಾರ್ಜುನ

ಬಿಜೆಪಿಯತ್ತ ಟಾಲಿವುಡ್ ಹೀರೋ ನಾಗಾರ್ಜುನ
Published On :

ಹೈದರಾಬಾದ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವ ಸ್ಟಾರ್ ನಟರ ಪಟ್ಟಿ ಬೆಳೆಯುತ್ತಿದ್ದು, ಇದೀಗ ಟಾಲಿವುಡ್ ಮತ್ತೋರ್ವ ಪ್ರಮುಖ ನಟ ನಾಗಾರ್ಜುನ ಅವರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ.

ಈಗಾಗಲೇ ನಾಗಾರ್ಜುನ ಮತ್ತು ನರೇಂದ್ರ ಮೋದಿ ಅವರ ಭೇಟಿ ನಿಶ್ಚಯವಾಗಿದ್ದು, ಇಂದು ನಾಗಾರ್ಜುನ ಅವರು ಅಹಮದಾಬಾದ್‌ನತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ನಟ ನಾಗಾರ್ಜುನ ಅವರು ಬಿಜೆಪಿ ಸೇರುವ ಕುರಿತು ನಿರ್ಧರಿಸಿದ್ದು, ತಮ್ಮ ಪತ್ನಿ ಅಮಲಾ ಅವರಿಗೆ ಬಿಜೆಪಿ ಪರವಾಗಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವಿಷಯವಾಗಿಯೇ ಈ ಹಿಂದೆ ಆಂಧ್ರ ಪ್ರದೇಶದ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದ ನಾಗಾರ್ಜುನ ಅವರು, ನಾಯ್ಡು ಅವರ ಸಲಹೆ ಮೇರೆಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಹಮದಾಬಾದ್‌ಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ 2008ರಲ್ಲಿ ದಿ.ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದ್ದ ನಾಗಾರ್ಜುನ ಅವರು ಚುನಾವಣೆ ಬಳಿಕ ರಾಜಕೀಯದಿಂದ ದೂರಸರಿದಿದ್ದರು. ವೈಎಸ್ ರಾಜಶೇಖರ ರೆಡ್ಡಿ ಅವರ ಮರಣಾನಂತರ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಆಂತರಿಕ ಕಚ್ಚಾಟ ಮತ್ತು ಆಂಧ್ರ ವಿಭಜನೆಯಲ್ಲಿ ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸತ್ತ ನಾಗಾರ್ಜುನ ಅವರು ಬಿಜೆಪಿ ಪಕ್ಷದತ್ತ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಶುಕ್ರವಾರ ಟಾಲಿವುಡ್‌ನ ಪ್ರಮುಖ ಮತ್ತು ಕೇಂದ್ರ ಸಚಿವ ಚಿರಂಜೀವಿ ಅವರ ಕಿರಿಯ ಸಹೋದರ ನಟ ಪವನ್ ಕಲ್ಯಾಣ್ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಮತ್ತೋರ್ವ ಸ್ಟಾರ್ ನಟ ಬಿಜೆಪಿಯತ್ತ ಒಲವು ತೋರಿದ್ದಾರೆ.

ಟಿಡಿಪಿ ತೊರೆದ ಹಾಸ್ಯ ನಟ ಮತ್ತು ಮಾಜಿ ಸಚಿವ ಬಾಬುಮೋಹನ್
ಮಾಜಿ ಸಚಿವ ಮತ್ತು ಖ್ಯಾತ ಹಾಸ್ಯ ನಟ ಬಾಬು ಮೋಹನ್ ಅವರು ತೆಲುಗು ದೇಶಂ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಪಕ್ಷದಲ್ಲಿ ತಮಗೆ ಯಾವುದೇ ಗೌರವ ನೀಡುತ್ತಿಲ್ಲ. ಕೆಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ತಮಗೆ ಟಿಕೆಟ್ ದೊರೆಯದಂತೆ ಮಾಡುತ್ತಿದ್ದಾರೆ ಎಂದು ಬಾಬು ಮೋಹನ್ ಅವರು ಆರೋಪಿಸಿದ್ದಾರೆ. ಅಲ್ಲದೆ ತಮ್ಮ ಮುಂದಿನ ನಡೆ ಕುರಿತು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.