ಶಶಿ ತರೂರ್ ಗೆ ಕ್ಲೀನ್ ಚಿಟ್ ಇಲ್ಲ

ನವದೆಹಲಿ: ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ.
ಸುನಂದಾ ಪುಷ್ಕರ್ ಸಾವಿನ ಕುರಿತು ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಉತ್ತರಿಸಿರುವ ದೆಹಲಿ ಪೊಲೀಸ್ ಆಯುಕ್ತರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಮಾಹಿತಿ ನೀಡಿದರು. 'ಕಳೆದ ಜನವರಿ 17ರಂದು ಸಾವಿಗೀಡಾಗಿದ್ದ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ನಾವು ತನಿಖೆ ನಡೆಸುತ್ತಿದ್ದೇವೆ. ಸುನಂದಾ ಪುಷ್ಕರ್ ಅವರು ತಂಗಿದ್ದ ಹೊಟೆಲ್ನ ಕ್ಲೀನರ್ ನಿಂದ ಸುನಂದ ಅವರ ಸಂಬಂಧಿಕರವೆರೆಗೂ ಅನುಮಾನ ಬಂದ ಎಲ್ಲರನ್ನೂ ನಾವು ವಿಚಾರಣೆಗೊಳಪಡಿಸಿದ್ದೇವೆ.
ಆದರೆ ಈ ನಡುವೆ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಕೇಳಿಬರುತ್ತಿರುವಂತೆ ದೆಹಲಿ ಪೊಲೀಸರು ಕೈಕಟ್ಟಿ ಕುಳಿತಿಲ್ಲ. ಪ್ರಕರಣ ಸಂಬಂಧ ಯಾರಿಗೂ ಕೂಡ ನಾವು ಕ್ಲೀನ್ ಚಿಟ್ ನೀಡಿಲ್ಲ. ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಂಡ ನಂತರ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಖಾರವಾಗಿ ಹೇಳಿದರು.
ಕಳೆದ ಜನವರಿ 17ರಂದು ದೆಹಲಿ ಹೊರವಲಯದ ಖಾಸಗಿ ಹೊಟೆಲ್ನಲ್ಲಿ ಮಾಜಿ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಸುನಂದಾ ಅವರ ದೇಹವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರ ಹೊಟ್ಟೆಯಲ್ಲಿ ಅಪಾಯಕಾರಿ ವಿಷವಿರುವುದು ಪತ್ತೆಯಾಗಿತ್ತು.
ಇದಕ್ಕೂ ಮೊದಲು ತಮ್ಮ ಪತಿ ಶಶಿ ತರೂರ್ ಮತ್ತು ಪಾಕಿಸ್ತಾನ ಮೂಲದ ಲೇಖಕಿ ಮೆಹರ್ ತೆರಾರ್ ಅವರ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಸುನಂದಾ ಪುಷ್ಕರ್ ಅವರು ಕಿಡಿಕಾರಿದ್ದರು. ನಂತರ ಇದು ಲೇಖಕಿ ಮೆಹರ್ ತರಾರ್ ಮತ್ತು ಸುನಂದಾ ಪುಷ್ಕರ್ ಅವರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಪಾಕಿಸ್ತಾನ ಲೇಖಕಿ ಮೆಹರ್ ತರಾರ್ ಅವರು ತಮಗೂ ಶಶಿ ತರೂರ್ ಅವರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.
ಆದರೆ ಮರುದಿನವೇ ಅಂದರೆ ಜನವರಿ 17 ಶುಕ್ರವಾರ ರಾತ್ರಿ ದೆಹಲಿ ಖಾಸಗಿ ಹೊಟೆಲ್ನಲ್ಲಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


