ಈಗಿನ ಸುದ್ದಿ

ಗಾವಸ್ಕರ್ ಬಿಸಿಸಿಐ ಅಧ್ಯಕ್ಷರಾಗಲಿ: ಸುಪ್ರೀಂ ಕೋರ್ಟ್ ಇಂಗಿತ

ಗಾವಸ್ಕರ್ ಬಿಸಿಸಿಐ ಅಧ್ಯಕ್ಷರಾಗಲಿ: ಸುಪ್ರೀಂ  ಕೋರ್ಟ್ ಇಂಗಿತ
Published On :

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅಥವಾ ಹಿರಿಯ ಆಟಗಾರರು ಬಿಸಿಸಿಐ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಹುದಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ವಿಚಾರಣೆ ಬಹುತೇಕ ಅಂತಿಮ ಹಂತ ತಲುಪಿದ್ದು, ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮತ್ತು ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರನ್ನು ಹಂಗಾಮಿ ಅದ್ಯಕ್ಷರನ್ನಾಗಿ ನೇಮಿಸಬೇಕು ಮತ್ತು ವಿಚಾರಣೆ ಮುಗಿಯುವವರೆಗೂ ಫಿಕ್ಸಿಂಗ್ ಆರೋಪ ಹೊತ್ತಿರುವ ರಾಜಸ್ತಾನ ರಾಯಲ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಈ ಕುರಿತು ನಾಳೆಯೊಳಗೆ ಉತ್ತರಿಸುವಂತೆ ಬಿಸಿಸಿಐಗೆ ನ್ಯಾಯಾಲಯ ಆದೇಶಿಸಿದೆ.

ಫಿಕ್ಸಿಂಗ್‌ನಲ್ಲಿ ಧೋನಿ ಭಾಗಿ: ಸರ್ಕಾರಿ ವಕೀಲರ ವಾದ
ಇದೇ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈತಂಡದ ಮಾಲೀಕರೊಂದಿಗೆ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೂಡ ಭಾಗಿಯಾಗಿದ್ದಾರೆ ಎಂದು ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ತಮ್ಮ ವಾದವನ್ನು ಮಂಡಿಸಿದ್ದಾರೆ. ನಾಯಕ ಧೋನಿ ಅಕ್ರಮದಲ್ಲಿ ಭಾಗಿಯಾಗಿದ್ದರಿಂದಲೇ ಅವರು ಮುಕುಲ್ ಮುದ್ಗಲ್ ಸಮಿತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾಯಕ ಧೋನಿಗೆ ತಿಳಿಯದೆ ಯಾವುದೇ ನಿರ್ಧಾರವನ್ನು ತಂಡದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಿಎಸ್‌ಕೆ ತಂಡದ ನಾಯಕ ಧೋನಿ ಅವರನ್ನು ಕೂಡ ವಿಚಾರಣೆಗೊಳಪಡಿಸಬೇಕು ಎಂದು ವಕೀಲರು ವಾದ ಮಂಡಿಸಿದರು.

ಬಿಸಿಸಿಐನಿಂದ ಶ್ರೀನಿವಾಸನ್ ಮತ್ತು ತಂಡವನ್ನು ಹೊರಹಾಕಬೇಕು: ಆದಿತ್ಯಾ ವರ್ಮಾ
ಸುಪ್ರೀಂಕೋರ್ಟ್ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಆದಿತ್ಯಾ ವರ್ಮಾ ಅವರು, ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಬೇಕೆಂದರೆ ಬಿಸಿಸಿಐನಿಂದ ಶ್ರೀನಿವಾಸನ್ ಮತ್ತು ತಂಡವನ್ನು ಹೊರಹಾಕಬೇಕು. ಅಲ್ಲದೆ ಐಪಿಎಲ್‌ನಿಂದ ಶ್ರೀನಿವಾಸನ್ ನೇತೃತ್ವದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯನ್ನು ದೂರವಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶ್ರೀನಿವಾಸನ್ ಮಾಲೀಕತ್ವದ ಇಂಡಿಯಾ ಸಿಮೆಂಟ್ಸ್ ಸಂಸ್ಥೆ ಬಿಸಿಸಿಐ ಅನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಶ್ರೀನಿವಾಸನ್ ವಿರುದ್ಧ ನಾನು ನಡೆಸಿದ ಹೋರಾಟಕ್ಕೆ ಇಂದು ಜಯಲಭಿಸಿದೆ. ದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಯಾಗಬೇಕು ಎಂದರೆ ಶ್ರೀನಿವಾಸನ್ ಮತ್ತು ಅವರ ತಂಡವನ್ನು ಬಿಸಿಸಿಐ ನಿಂದ ದೂರವಿಡಬೇಕು. ಶ್ರೀನಿವಾಸನ್ ಅವರ ದುರಾಡಳಿತ ಅಂತ್ಯವಾಗಬೇಕು ಎಂದು ಆದಿತ್ಯಾ ವರ್ಮಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.