ನಮೋ ಹತ್ಯೆ ಬೆದರಿಕೆ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು

ಪಾಟ್ನಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಹೇಳಿರುವ ಶರಣ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ವಿರುದ್ಧ ದೂರು ದಾಖಲಾಗಿದೆ.
ಶರಣ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್ ಮಸೂದ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕೊಲ್ಲಬೇಕು ಎನ್ನುವ ದಾಟಿಯಲ್ಲಿ ಮಾತನಾಡಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ವಿವಾದಾತ್ಮಕ ಭಾಷಣ ಕುರಿತಂತೆ ದೂರು ದಾಖಲಾಗಿದೆ. ಘಟನೆ ಕುರಿತು ವಿವರ ನೀಡುವಂತೆ ಇಮ್ರಾನ್ ಮಸೂದ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ನಿನ್ನೆ ನಡೆದಿದ್ದ ಸಮಾವೇಶದಲ್ಲಿ ಮಾತನಾಡಿದ್ದ ಇಮ್ರಾನ್ ಮಸೂದ್ ಅವರು, ನರೇಂದ್ರ ಮೋದಿ ಅವರು ಉತ್ತರ ಪ್ರದೇಶವನ್ನು ಗುಜರಾತ್ ಎಂದು ಭಾವಿಸಿದಂತಿದೆ. ಗುಜರಾತ್ ರಾಜ್ಯದಲ್ಲಿ ಶೇ.4ರಷ್ಟು ಮಾತ್ರ ಮುಸ್ಲಿಮರಿದ್ದು, ಉತ್ತರ ಪ್ರದೇಶದಲ್ಲಿ ಶೇ.42 ರಷ್ಟು ಮುಸ್ಲಿಂ ಬಾಂಧವರಿದ್ದಾರೆ. ನಾನು ತೀರ ಕೆಳಮಟ್ಟದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಜನತೆಗಾಗಿ ನಾನು ಪ್ರಾಣ ತ್ಯಾಗಕ್ಕೂ ಸಿದ್ದ. ನನಗೆ ಯಾವುದೇ ಭಯವಿಲ್ಲ. ನನ್ನ ಜನರ ತಂಟೆಗೆ ಬಂದರೆ ನಿಮ್ಮನ್ನು ಕೊಲ್ಲಲು ಕೂಡ ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್ ಅಭ್ಯರ್ಥಿಯ ಈ ವಿವಾದಾತ್ಮಕ ಭಾಷಣ ಕುರಿತಂತೆ ಸ್ವತಃ ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಇಮ್ರಾನ್ ಮಸೂದ್ ಅವರ ಹೇಳಿಕೆಯನ್ನು ಖಂಡಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಘಟಕ, ಅವರ ಹೇಳಿಕೆ ತಪ್ಪು ಮತ್ತು ಸ್ವೀಕಾರರ್ಹವಲ್ಲದ್ದು ಎಂದು ಹೇಳಿದೆ.
ಕ್ಷಮೆ ಕೇಳಿದ ಇಮ್ರಾನ್ ಮಸೂದ್
ತಮ್ಮ ಭಾಷಣದ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಇಮ್ರಾನ್ ಮಸೂದ್ ಅವರು ಕ್ಷಮೆಯಾಚಿಸಿದ್ದಾರೆ. ನನ್ನಿಂದ ತಪ್ಪಾಗಿದ್ದು, ಚುನಾವಣಾ ಸಂದರ್ಭದಲ್ಲಿ ತಾವು ಇಂತಹ ಮಾತುಗಳನ್ನು ಆಡಬಾರದಾಗಿತ್ತು. ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


