ಮುಷರಫ್ 'ದೇಶದ್ರೋಹಿ': ಪಾಕ್ ಸುಪ್ರೀಂಕೋರ್ಟ್

ಇಸ್ಲಾಮಾಬಾದ್: 2007ರಲ್ಲಿ ಬಲವಂತವಾಗಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರನ್ನು ಪಾಕಿಸ್ತಾನ ನ್ಯಾಯಾಲಯ ದೇಶದ್ರೋಹಿ ಎಂದು ಹೇಳಿದೆ.
ಪಾಕಿಸ್ತಾನದ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠದ ಅಧೀನದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಮುಷರಫ್ ಅವರು ಐದು ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ಹೇಳಿದೆ. ಅಲ್ಲದೆ ತಮ್ಮ ಅಧಿಕಾರ ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ್ರೋಹ ಮಾಡಿದ್ದಾರೆ ಎಂದು ನ್ಯಾಯಾಲಯ ಕಿಡಿಕಾರಿದೆ.
ಇಂದು ನಡೆದ ವಿಚಾತಣೆಯಲ್ಲಿ ಮುಷರಫ್ ಅವರು ಗೈರಾಗಿದ್ದರೂ ಕೂಡ ಅವರ ಪರವಾಗಿ ಹಾಜರಿದ್ದ ವಕೀಲರು ತಮ್ಮ ವಾದ ಮಂಡಿಸಿದರು. ಮುಷರಫ್ ಅವರ ಆರೋಗ್ಯ ಹದಗೆಟ್ಟಿರುವುದರಿಂದ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಅಲ್ಲದೆ ಪ್ರಸ್ತುತ ಅವರಿಗೆ ಪ್ರಾಣಬೆದರಿಕೆ ಇದ್ದು, ಅವರು ನ್ಯಾಯಾಲಯಕ್ಕೆ ಗೈರಾಗಿದ್ದಕ್ಕೆ ಇದು ಕೂಡ ಒಂದು ಕಾರಣ ಎಂದು ತಮ್ಮ ವಾದ ಮಂಡಿಸಿದರು.
ನ್ಯಾಯಾಲಯದ ಅದೇಶದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಷರಫ್ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ತುಂಬಾ ಗೌರವವಿದೆ. ನನಗೆ ಯಾವುದೇ ರೀತಿಯ ಅಹಂ ಇಲ್ಲ. ಈ ಹಿಂದೆ 16 ಬಾರಿ ನಾನು ಇಸ್ಲಾಮಾಬಾದ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆದ ವಿಚಾರಣೆಗಳಲ್ಲಿ ಪಾಲ್ಗೊಂಡಿದ್ದೇನೆ. ನನನ್ನು ನ್ಯಾಯಾಲಯ ದೇಶದ್ರೋಹಿ ಎಂದು ಕರೆದಿದೆ. ನಾನು ಸತತ 9 ವರ್ಷಗಳ ಕಾಲ ಪಾಕಿಸ್ತಾನ ಸೇನಾಪಡೆಯ ಮುಖ್ಯಸ್ಥನಾಗಿ ಸೇವೆ ಮಾಡಿದ್ದೇನೆ. 45 ವರ್ಷಗಳ ಕಾಲ ಮಿಲಿಟರಿ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. 2 ಯುದ್ಧಗಳಲ್ಲಿ ನಾನು ಸೆಣಸಿದ್ದೇನೆ ಇಂದು ದೇಶದ್ರೋಹವೇ..? ಎಂದು ನ್ಯಾಯಾಲಯದ ತೀರ್ಪಿನ ವಿರುದ್ಧ ಮುಷರಫ್ ಪರೋಕ್ಷ ಕಿಡಿಕಾರಿದ್ದಾರೆ.
1999ರಿಂದ 2008ರವರೆಗೆ ಪಾಕಿಸ್ತಾನದ ಸೇನಾಪಡೆಯ ಅಧ್ಯಕ್ಷ ಮತ್ತು ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್ ಅವರು, 2007ರಲ್ಲಿ ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನಿಂದಾಗಿ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಮುಷರಫ್ ಅವರ ದುರಾಡಳಿತದ ವಿರುದ್ಧ ತಿರುಗಿಬಿದಿದ್ದ ಪ್ರತಿಪಕ್ಷಗಳನ್ನು ಮಣಿಸಲು ಮತ್ತು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮುಷರಫ್ ಪಾಕಿಸ್ತಾನದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಇದರಿಂದ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಮಾನತುಗೊಂಡು, ಪಾಕಿಸ್ತಾನ ಸೇನೆ ಅಧಿಕಾರವನ್ನು ವಹಿಸಿಕೊಳ್ಳುವಂತಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


