ಈಗಿನ ಸುದ್ದಿ

ರಾಷ್ಟ್ರವಿರೋಧಿ ಮುಸ್ಲಿಮರಿಗೆ ವಿರೋಧ

ರಾಷ್ಟ್ರವಿರೋಧಿ ಮುಸ್ಲಿಮರಿಗೆ ವಿರೋಧ
Published On :

ಮುಂಬೈ: ದೇಶದಲ್ಲಿ ಕಾನೂನು ಬಾಹಿರ ಚಟುವಿಟಿಕೆ ಮತ್ತು ದೇಶವಿದ್ರೋಹ ಕಾರ್ಯಗಳಲ್ಲಿ ಪಾಲ್ಗೊಳ್ಳುವ ರಾಷ್ಟ್ರವಿರೋಧಿ ಮುಸ್ಲಿಮರನ್ನು ವಿರೋಧಿಸುತ್ತೇವೆ ಎಂದು ಶಿವಸೇನೆ ಮುಖ್ಯಸ್ಥ ಉಧ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರಕಟಕೊಂಡ ಸಂಪಾದಕೀಯ ಕುರಿತು ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಾವು ಮೊದಲಿನಿಂದಲೂ ರಾಷ್ಟ್ರವಿರೋಧಿ ಮುಸ್ಲಿಮರ ವಿರೋಧಿಗಳು. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರೀಕ ಕೂಡ ಈ ನೆಲದ ಕಾನೂನು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ನಮ್ಮ ತಂದೆ ಬಾಳಾಠಾಕ್ರೆ ಅವರು ಈ ನೆಲವನ್ನು ತಮ್ಮ ಮಾತೃಭೂಮಿ ಎಂದು ಭಾವಿಸಿದ, ಈ ನೆಲದ ಕಾನೂನನ್ನು ಗೌರವಿಸುವ ಮತ್ತು ಸೌಹಾರ್ಧಯುತವಾಗಿ ಕೂಡಿ ಬಾಳುವ ಮುಸ್ಲಿಮರ ವಿರೋಧಿಯಾಗಿರಲಿಲ್ಲ. ಬದಲಿಗೆ ರಾಷ್ಟ್ರವಿರೋಧಿ ಮುಸ್ಲಿಮರ ವಿರುದ್ಧ ಅವರು ಧನಿ ಎತ್ತಿದ್ದರು. ನಾವು ಕೂಡ ಅವರ ಹಾದಿಯಲ್ಲಿಯೇ ನಡೆಯುತ್ತಿದ್ದೇವೆ ಎಂದು ಉದ್ಧವ್ ಹೇಳಿದರು.

ಒವೈಸಿ ವಿರುದ್ಧ ಉಧ್ಧವ್ ಕಿಡಿ
ಇದೇ ವೇಳೆ ಕೇವಲ 15 ನಿಮಿಷದಲ್ಲಿ ಹಿಂದೂಗಳನ್ನು ಸರ್ವನಾಶ ಮಾಡುತ್ತೇನೆ ಎಂಬ ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಅವರ ಹೇಳಿಕೆಯನ್ನು ಖಂಡಿಸಿದ ಉದ್ಧವ್ ಠಾಕ್ರೆ, ನಮ್ಮ ತಂದೆ ಮಹಾರಾಷ್ಟ್ರದಲ್ಲಿ ಹಿಂದೂಗಳ ಹೃದಯ ಸಾಮ್ರಾಟರಾಗಿದ್ದರು. ಆದರೆ ಅವರು ಎಂದಿಗೂ ಮುಸ್ಲಿಮರ ವಿರುದ್ಧ ಅಂತಹ ಹೇಳಿಕೆ ನೀಡಿಲ್ಲ. ಒಂದು ವೇಳೆ ಯಾರಾದರೂ ಪಾಕಿಸ್ತಾನಿ ಮುಸ್ಲಿಮರಂತೆ ಮಾತನಾಡಿದರೆ ಅಥವಾ ಅಂತಹ ಪರಿಸ್ಥಿತಿ ತಲೆದೋರಿದರೆ ಆಗ ಅವರಿಗೆ ಯಾರು ಸುರಕ್ಷೆ ನೀಡಬೇಕು ಎಂಬುದನ್ನು ಹಿಂದೂಗಳೇ ನಿರ್ಧರಿಸಬೇಕು ಎಂದು ಹೇಳಿದರು.

ಮೋದಿ ಹಿಂದುತ್ವದ ಮೇಲೆ ಗುಜರಾತ್ ಗಲಭೆ ಕರಿನೆರಳು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ಮಾತನಾಡಿದ ಉಧ್ಧವ್ ಠಾಕ್ರೆ, ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದರೂ ಕೂಡ ಅವರ ಮೇಲೆ ಗುಜರಾತ್ ಗಲಭೆಗಳ ಕಪ್ಪುಛಾಯೆ ಇದ್ದೇ ಇರುತ್ತದೆ. ನರೇಂದ್ರ ಮೋದಿ ಅವರು ಹಿಂದುತ್ವವಾದಿ ಎಂಬುದು ಇಡೀ ದೇಶದ ಜನರಿಗೆ ತಿಳಿದಿದೆ. ಆದರೆ ನರೇಂದ್ರ ಮೋದಿ ನಾಯಕತ್ವದಲ್ಲಿ ಗುಜರಾತ್‌ನಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದು, ಗೋದ್ರಾ ಗಲಭೆಯನ್ನು ಹೊರತು ಪಡಿಸಿದರೆ ಇದುವರೆವಿಗೂ ಯಾವುದೇ ಕೋಮು ಗಲಭೆಗಳು ಸಂಭವಿಸಿಲ್ಲ ಎಂದು ಹೇಳಿದರು.

ಗಡ್ಕರಿ, ರಾಜ್ ಠಾಕ್ರೆ ಭೇಟಿಗೆ ಉದ್ಧವ್ ಅಸಮಾಧಾನ
ಈ ನಡುವೆ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಹಿರಿಯ ಮುಖಂಡ ನಿತಿನ್ ಗಡ್ಕರಿ ಮತ್ತು ರಾಜ್ ಠಾಕ್ರೆ ಅವರ ಭೇಟಿ ಕುರಿತು ಮಾತನಾಡಿರುವ ಉಧ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತಿನ್ ಗಡ್ಕರಿ ಓರ್ವ ವ್ಯಾಪಾರಿಯಾಗಿದ್ದು, ವ್ಯಾಪರದ ಉದ್ದೇಶದಿಂದ ಅವರು ಯಾರನ್ನು ಬೇಕಾದರು ಸಂಪರ್ಕಿಸಬಹುದು. ಇದರಿಂದ ನಮಗೇನು ಆಗಬೇಕಿಲ್ಲ.

ಇದನ್ನು ಸ್ವತಃ ಗಡ್ಕರಿ ಅವರೇ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಒಂದಂತೂ ನಿಜ. ನಿತಿನ್ ಗಡ್ಕರಿ ವಿರುದ್ಧ ನನಗೆ ಕೊಂಚ ಅಸಮಾಧಾನವಿದೆಯೇ ಹೊರತು ರಾಜ್ ವಿರುದ್ಧವಾಗಲಿ ಅಥವಾ ಬಿಜೆಪಿ ವಿರುದ್ಧವಾಗಲಿ ಯಾವುದೇ ಶತ್ರುತ್ವವಿಲ್ಲ ಎಂದು ಹೇಳಿದರು.

ಒಟ್ಟಾರೆ ಲೋಕಸಭಾ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹಪಹಪಿಸುತ್ತಿರುವ ರಾಜಕೀಯ ಪಕ್ಷಗಳು ಮೈತ್ರಿ ಮೊರೆಹೋಗುತ್ತಿವೆ. ಬಿಜೆಪಿ ಕೂಡ ತನ್ನ ಹಳೆಯ ಗೆಳೆಯರನ್ನು ಒಟ್ಟು ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಇದರಿಂದ ಉದ್ಧವ್ ಠಾಕ್ರೆ ಅವರು ಅಸಮಾಧಾನಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.