ಚಿತ್ರರಂಗ ತೊರೆಯುತ್ತೇನೆ: ಪವನ್ ಕಲ್ಯಾಣ್

ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಚಿತ್ರರಂಗವನ್ನು ತೊರೆಯುತ್ತೇನೆ ಎಂದು ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್ ಹೇಳಿದ್ದಾರೆ.
ಸೀಮಾಂಧ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಪವನ್ ಕಲ್ಯಾಣ್ ಅವರು ಬಿಜೆಪಿ ಮತ್ತು ಟಿಡಿಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್ ಅವರು, ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ವಾಮಮಾರ್ಗವನ್ನು ಅನುಸರಿಸುತ್ತಿದ್ದು, ಜನರಿಗೆ ಹಣ ನೀಡಿ ಚುನಾವಣೆ ಗೆಲ್ಲಲು ನೋಡುತ್ತಿದ್ದಾರೆ. ಆಂಧ್ರ ಪ್ರದೇಶ ಜನತೆ ಭ್ರಷ್ಟಾಚಾರಕ್ಕೆ ಬೆಲೆ ನೀಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ನಾನು ಚಿತ್ರೋಧ್ಯಮವನ್ನು ತೊರೆದು, ಬೀದಿಗಿಳಿದು ಹೋರಾಟ ನಡೆಸುತ್ತೇನೆ ಎಂದು ಹೇಳಿದರು.
'ವೈಎಸ್ಆರ್ ಕಾಂಗ್ರೆಸ್ ಪಕ್ಷ ಈ ಹಿಂದೆ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ತೊಡಗಿ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಈಗ ಅದೇ ಹಣದಿಂದ ಚುನಾವಣೆ ಎದುರಿಸುತ್ತಿದೆ. ಆಪಕ್ಷದ ಅಭ್ಯರ್ಥಿಗಳು ನೀಡುವ ಹಣವನ್ನು ತೆಗೆದುಕೊಳ್ಳಿ ಪರವಾಗಿಲ್ಲ. ಏಕೆಂದರೆ ಅದು ನಮ್ಮ ಹಣವೇ. ತೆರಿಗೆ ರೂಪದಲ್ಲಿ ನಾವು ಸರ್ಕಾರಕ್ಕೆ ನೀಡುವ ಹಣವನ್ನು ಇವರು ಭ್ರಷ್ಟಾಚಾರದ ರೂಪದಲ್ಲಿ ತಮ್ಮ ಖಾತೆಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಹಣವನ್ನು ನಾವು ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ನಿಮ್ಮ ಮತವನ್ನು ಮಾತ್ರ ಬಿಜೆಪಿ ಮತ್ತು ಟಿಡಿಪಿ ಅಭ್ಯರ್ಥಿಗಳಿಗೇ ಹಾಕಿ' ಎಂದು ಪವನ್ ಹೇಳಿದರು.
ಅಂತೆಯೇ ಜಗನ್ ಮೋಹನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್ ಅವರು, ಒಂದು ವೇಳೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅದು ಮತ್ತೆ ಭ್ರಷ್ಟಾಚಾರದಲ್ಲಿ ತೊಡಗಿ ಜನರಿಗೆ ತೊಂದರೆ ನೀಡಿದರೆ ನಾನು ಸುಮ್ಮನಿರುವುದಿಲ್ಲ. ಚಿತ್ರರಂಗವನ್ನು ಕೂಡ ತೊರೆಯುತ್ತೇನೆ. ನಟನೆ ತೊರೆದು ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಪವನ್ ಎಚ್ಚರಿಕೆ ನೀಡಿದರು.
ಒಟ್ಟಾರೆ ಸೀಮಾಂಧ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳು ತಾರೆಗಳ ಮೊರೆ ಹೋಗಿವೆ. ಅಂತೆಯೇ ವಿವಿಧ ಪಕ್ಷಗಳ ಪರವಾಗಿ ನಿಂತಿರುವ ತಾರೆಗಳ ಬಿರುಸಿನ ವಾಗ್ಜರಿ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


