ಈಗಿನ ಸುದ್ದಿ

ಬಿಸಿಸಿಐನಿಂದ ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಮಾನತು

ಬಿಸಿಸಿಐನಿಂದ ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಮಾನತು
Published On :

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ರಾಜಸ್ತಾನ ಕ್ರಿಕೆಟ್ ಸಂಸ್ಥೆಯನ್ನು ಮಂಗಳವಾರ ಅಮಾನತು ಮಾಡಿದೆ.

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಬಿಸಿಸಿಐ, ರಾಜಸ್ತಾನ ಕ್ರಿಕೆಟ್ ಸಂಸ್ಥೆಯನ್ನು ಅನಿರ್ಧಿಷ್ಟಾವಧಿಗೆ ಅಮಾನತು ಮಾಡಲು ನಿರ್ಧರಿಸಿದೆ.

ಈ ಬಗ್ಗೆ ರಾಜಸ್ತಾನ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿರುವ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅವರು, ಬಿಸಿಸಿಐನ ಸಂಯೋಜಿತ ಘಟಕಗಳು ಬಿಸಿಸಿಐ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಅಂತಹವುಗಳನ್ನು ಅಮಾನತು ಮಾಡಲಾಗುತ್ತದೆ. ರಾಜಸ್ತಾನ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ವಿರೋಧದ ಹೊರತಾಗಿಯೂ ನಿಷೇಧಕ್ಕೆ ಒಳಗಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದು ಬಿಸಿಸಿಐ ಕಾನೂನು 32.7ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಬಿಸಿಸಿಐ ಹಂಗಾಮಿ ಅಧ್ಯಕ್ಷರಾದ ಶಿವಲಾಲ್ ಯಾದವ್ ಅವರು ರಾಜಸ್ತಾನ ಕ್ರಿಕೆಟ್ ಸಂಸ್ಥೆಯನ್ನು ಅನಿರ್ಧಿಷ್ಟಾವಧಿಗೆ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಅಲ್ಲದೆ ಬಿಸಿಸಿಐ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಯಾವುದೇ ಸದಸ್ಯರು ಬಿಸಿಸಿಐನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ.

ಬಿಸಿಸಿಐ ನಿರ್ಧಾರದಿಂದಾಗಿ ರಾಜಸ್ತಾನ ಕ್ರಿಕೆಟಿಗರ ಮೇಲೆ ಬೀರುವ ಪರಿಣಾಮದ ಕುರಿತು ಮಾಧ್ಯಮಗಳಿಗೆ ವಿವರಿಸಿದ ಸಂಜಯ್ ಪಟೇಲ್ ಅವರು, ರಾಜಸ್ತಾನದ ಹಲವು ಆಟಗಾರರು ವಿವಿಧ ಮಾದರಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಬಿಸಿಸಿಐನ ಈ ನಿರ್ಧಾರದಿಂದಾಗಿ ಅವರ ಮೇಲೆ ಪರಿಣಾಮ ಬೀರಬಹುದು. ಪ್ರಸ್ತುತ ಅಶೋಕ್ ಮೆನೇರಿಯಾ ಮತ್ತು ಅಭಿಮನ್ಯು ಲಂಬಾ ಅವರು ಅಂಡರ್19 ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಬಿಸಿಸಿಐ ರಾಜಸ್ತಾನ ಆಟಗಾರರ ಬಗಗೆ ಚಿಂತನೆ ನಡೆಸುತ್ತದೆ ಎಂದು ತಿಳಿಸಿದರು.

ಒಟ್ಟಾರೆ ಬಿಸಿಸಿಐ ನಿಷೇಧಕ್ಕೆ ಒಳಗಾಗಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ಹೇಗಾದರೂ ಮತ್ತೆ ಬಿಸಿಸಿಐ ಪ್ರವೇಶಿಸಲು ಹವಣಿಸುತ್ತಿದ್ದರು. ಆದರೆ ಬಿಸಿಸಿಐ ಮಾತ್ರ ಇದಕ್ಕೆ ಆಸ್ಪದ ನೀಡಿರಲಿಲ್ಲ. ಕೊನೆಗೆ ರಾಜಸ್ತಾನ ಕ್ರಿಕೆಟ್ ಸಂಸ್ಥೆಯನ್ನು ಆಶ್ರಯವಾಗಿ ಬಳಸಿದ ಲಲಿತ್ ಮೋದಿ ತಮ್ಮ ಪ್ರಭಾವ ಬಳಸಿ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು. ಆ ಮೂಲಕ ಮತ್ತೆ ಬಿಸಿಸಿಐ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದರು.

ಆದರೆ ಬಿಸಿಸಿಐ ರಂಗೋಲಿ ಕೆಳಗೆ ತೂರಿ ರಾಜಸ್ತಾನ ಕ್ರಿಕೆಟ್ ಸಂಸ್ಥೆಯನ್ನೇ ಅಮಾನತು ಮಾಡಿದೆ. ಕ್ರಿಕೆಟ್ ಸಂಸ್ಥೆಗಳ ವೈಯುಕ್ತಿಕ ಹಿತಾಸಕ್ತಿಯಿಂದಾಗಿ ಇದೀಗ ರಾಜಸ್ತಾನ ಕ್ರಿಕೆಟ್ ಆಟಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿರುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.