ಮೋದಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ದೇಶಗಳ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 6 ಗಂಟೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಭೋದಿಸಲಿದ್ದು, ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ.
ಸತತ 10 ವರ್ಷಗಳ ನಂತರ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರುತ್ತಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಸೇರಿದಂತೆ ವಿವಿಧ ದೇಶಗಳ ಪ್ರಧಾನಿ ಮತ್ತು ಅಧ್ಯಕ್ಷರನ್ನು ಬಿಜೆಪಿ ಆಹ್ವಾನಿಸಿದೆ. ಈ ಪೈಕಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭುಟ್ಟೊ, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಖರ್ಜೈ, ನೇಪಾಳ ಪ್ರಧಾನಿ ಸುಶೀಲ್ ಕೋಯಿರಾಲ ಮತ್ತು ಬಾಂಗ್ಲಾದೇಶ ಪಾರ್ಲಿಮೆಂಟ್ ಸ್ಪೀಕರ್ ಶಿರಿನ್ ಶರ್ಮಿನ್ ಚೌದರಿ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನ್ ಅವರು ಜಪಾನ್ನ ಟೋಕಿಯೋ ಪ್ರವಾಸದಲ್ಲಿರುವುದರಿಂದ ಅವರ ಪರವಾಗಿ ಪಾರ್ಲಿಮೆಂಟ್ ಸ್ಪೀಕರ್ ಶರ್ಮಿನ್ ಚೌದರಿ ಅವರು ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಭೂತಾನ್ ಪ್ರಧಾನಿ ಶರಿಂಗ್ ತಾಬ್ಗೆ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅಬ್ದುಲ್ ಗಯೂಮ್ ಅವರು ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದಲ್ಲದೆ ಸಾರ್ಕ್ ಸಮಿತಿಯ ಸದಸ್ಯ ರಾಷ್ಟ್ರಗಳ ವಿವಿಧ ಸದಸ್ಯರು ಪ್ರತಿಜ್ಞಾವಿಧಿಗೆ ಸಾಕ್ಷಿಯಾಗಲಿದ್ದಾರೆ. ಉಳಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಬಿಜೆಪಿ ಆಹ್ವಾನ ನೀಡಿದ್ದು, ಜಾರ್ಖಂಡ್ನಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ, ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಮತ್ತು ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಪಟ್ಟಾಭಿಷೇಕಕ್ಕೆ ಸಿದ್ದು, ಜಯಾ ಮತ್ತು ದೀದಿ ಗೈರು
ಇದೇ ವೇಳೆ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳದಿರಲು ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ನಿರ್ಧರಿಸಿದ್ದು, ಈ ಪೈಕಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರಾಗಲು ನಿರ್ಧರಿಸಿದ್ದಾರೆ.
ಅತಿಥಿ ಸತ್ಕಾರಕ್ಕೆ ಸಿದ್ಧವಾಗಿವೆ ವಿವಿಧ ರಾಜ್ಯಗಳ ಖ್ಯಾತ ಖಾಧ್ಯಗಳು
ಅಂತೆಯೇ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ಅತಿಥಿಗಳ ಸತ್ಕಾರಕ್ಕೆ ರಾಷ್ಟ್ರಪತಿ ಭವನದ ಸುತ್ತಮುತ್ತಲಿನ ಸುಮಾರು 23 ಸ್ಟಾರ್ ಹೊಟೆಲ್ಗಳನ್ನು ಬುಕ್ ಮಾಡಿದ್ದು, ಅವರ ಊಟೋಪಚಾರಕ್ಕಾಗಿ ನೂರಾರು ಖ್ಯಾತ ಬಾಣಸಿಗರನ್ನು ನೇಮಿಸಲಾಗಿದೆ. ಮೂಲಗಳ ಪ್ರಕಾರ ಬಂದ ಅತಿಥಿಗಳಿಗೆ ವಿವಿಧ ರಾಜ್ಯಗಳ ಖ್ಯಾತ ಖಾಧ್ಯಗಳನ್ನು ತಯಾರಿಸಲಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಯೋಜಿಸಿರುವ ವಿಶೇಷ ಔತಣ ಕೂಟದಲ್ಲಿ ತಮಿಳುನಾಡಿನ ಚಿಕೆನ್ ಚೆಟ್ಟಿನಾಡ್, ಪಂಜಾಬ್ನ ದಾಲ್ ಮಖನಿ, ಜೈಪುರಿ ಭಿಂದಿ, ಗುಜರಾತ್ ನ ಖೇಲಾ ಮೇತಿ, ಪ್ರಾನ್ ಸುಕ್ಕಾ, ಬೆಂಗಾಲಿ ಖಾಧ್ಯ ಪಟೊಲ್ ದುರ್ಮಾ, ತಂದೂರಿ ಆಲೂ, ಮಟನ್ ಟಿಕ್ಕಾವನ್ನು ವಿವಿಧ ದೇಶಗಳ ಅತಿಥಿಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ.
ಭಾರಿ ಭದ್ರತೆ ನಡುವೆ ಮೋದಿ ಪ್ರಮಾಣ ವಚನ
ಇದೇ ವೇಳೆ ನರೇಂದ್ರ ಮೋದಿ ಅವರ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರಾಷ್ಟ್ರಪತಿ ಭವನದ ಸುತ್ತಮುತ್ತ ಸುಮಾರು 10 ಸಾವಿರಕ್ಕೂ ಅಧಿಕ ಪೊಲೀಸ್ ಮತ್ತು ಸೇನಾ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. ವೈಮಾನಿಕ ಕಣ್ಗಾವಲಿಗಾಗಿ ವಾಯುಪಡೆಯ ಎರಡು ವಿಶೇಷ ವಿಮಾನಗಳು ಗಸ್ತು ತಿರುಗುತ್ತಿದ್ದು, ಎನ್ಎಸ್ಜಿ, ಸಿಆರ್ಪಿಎಫ್ನ ಸಾವಿರಾರು ಯೋಧರನ್ನು ಆಯಾಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯಾಹ್ನ 1ಗಂಟೆಯಿಂದಲೇ ರಾಷ್ಟ್ರಪತಿ ಭವನದ ಸುತ್ತಮುತ್ತಲಿನ ಐದು ಕಿ.ಮೀ. ಸುತ್ತಳತೆಯಲ್ಲಿ ಎಲ್ಲ ರೀತಿಯ ರಸ್ತೆ ಸಂಚಾರ ಮತ್ತು ವಾಣಿಜ್ಯವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದ್ದು, ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ.
ಒಟ್ಟಾರೆ ಇದೇ ಮೊದಲ ಬಾರಿಗೆ ಸಂಸದ ಮತ್ತು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಸಂಸತ್ ಭವನದ ಮೆಟ್ಟಿಲೇರುತ್ತಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನವದೆಹಲಿ ಸಕಲ ರೀತಿಯಲ್ಲಿಯೂ ಸಜ್ಜುಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


