ಫ‌ಸ್ಟ್‌ ಪೀರಿಯೆಡ್‌: ಹೆಣ್ಣುಮಕ್ಕಳಲ್ಲಾಗುವ ದೈಹಿಕ ಬದಲಾವಣೆಗಳೇನು? ಸ್ವಯಂ ಆರೈಕೆ ಹೇಗೆ?

ಋತುಮತಿಯಾಗುವುದು ಹೆಣ್ಣುಮಕ್ಕಳಿಗೆ ದೇವರು ಕೊಟ್ಟಿರುವ ವರ. ಹೆಣ್ಣುಮಕ್ಕಳು ಯಾವಾಗ ಋತುಮತಿಯಾಗುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಹಿಂದೆ 14-16 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದರು. ಆದರೀಗ 12-13 ವರ್ಷಕ್ಕೆ ಪೀರಿಯೆಡ್ಸ್ ಆರಂಭವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಋತುಮತಿಯಾಗುವುದು ಹೆಣ್ಣುಮಕ್ಕಳಿಗೆ ದೇವರು ಕೊಟ್ಟಿರುವ ವರ. ಹೆಣ್ಣುಮಕ್ಕಳು ಯಾವಾಗ ಋತುಮತಿಯಾಗುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಹಿಂದೆ 14-16 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದರು. ಆದರೀಗ 12-13 ವರ್ಷಕ್ಕೆ ಪೀರಿಯೆಡ್ಸ್ ಆರಂಭವಾಗುತ್ತಿದೆ. ಇನ್ನು ಕೆಲವರು ಬಹಳ ಚಿಕ್ಕ ವಯಸ್ಸಿಗೇ ಋತುಮತಿಯಾಗುತ್ತಿದ್ದಾರೆ.

ಋತುಮತಿಗೆ ಸರಾಸರಿ ವಯಸ್ಸು 12 ಎಂದು ಹೇಳಲಾಗುತ್ತಿದೆ. ಆದರೆ, ಪ್ರತೀ ಹೆಣ್ಣುಮಕ್ಕಳಿಗೂ ಅವರದ್ದೇ ಆದ ಅವಧಿ ಇರುತ್ತದೆ. ಅದು ಆರೋಗ್ಯ, ವಾತಾವರಣ ಹಾಗೂ ಜೀವನ ಶೈಲಿಗಳ ಮೇಲೆ ಅವಲಂಬಿತವಾಗಿರುತ್ತದೆ. ಋತುಮತಿಯಾಗುವುದಕ್ಕಿಂತ ಮುನ್ನವೇ ಹೆಣ್ಣುಮಕ್ಕಳಿಗೆ ಆಕೆಯ ದೇಹ ಚಿಹ್ನೆಗಳನ್ನು ನೀಡುತ್ತವೆ. ಹುಡುಗಿಯೊಬ್ಬಳು ಪ್ರೌಢವಸ್ಥೆಗೆ ತಲುಪುವ ಪ್ರಕ್ರಿಯೆ ಎರಡು ವರ್ಷದವರೆಗೆ ಸಾಗುತ್ತದೆ. 8 ವರ್ಷದ ವಯಸ್ಸಿನಲ್ಲಿಯೇ ಕೆಲ ಮಕ್ಕಳು ಈ ಹಂತಕ್ಕೆ ಬರುತ್ತಾರೆ. ಈ  ಅವಧಿಯಲ್ಲಿ ಮಕ್ಕಳ ಸ್ತನಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಸಾಮಾನ್ಯವಾಗಿ 11-12ನೇ ವಯಸ್ಸಿನಲ್ಲಿ ಈ ಪ್ರಕ್ರಿಯೆ ಆರಂಭವಾಗುತ್ತದೆ. ಸ್ತನಗಾತ್ರದ ಬೆಳವಣಿಗೆ ಅವರು ಪ್ರೌಢವಸ್ಥೆಗೆ ತಲುಪುವ ಮೊದಲ ಲಕ್ಷಣ ಕೂಡ ಆಗಿದೆ.

ಸ್ತನದ ಬೆಳವಣಿಗೆ ಪ್ರಾರಂಭವಾದ ಸ್ಪಲ್ಪ ಅವಧಿಯಲ್ಲಿಯೇ ಮಕ್ಕಳ ದೇಹದಲ್ಲಿ ಕೂದಲ ಬೆಳವಣಿಗೆ ಆರಂಭವಾಗುವುದನ್ನು ಗಮನಿಸಬಹುದು. ಈ ಮೊದಲು ಕೂದಲಿಲ್ಲದ ಸ್ಥಳಗಳಲ್ಲಿ ಕೂದಲು ಬೆಳೆಯಲಾರಂಭಿಸುತ್ತದೆ. ಕಂಕಳು, ಕಾಲುಗಳು ಹಾಗೂ ಜನನಾಂಗ ಪ್ರದೇಶದಲ್ಲಿ ಕೂದಲು ಬೆಳೆಯುತ್ತದೆ. ಇದು ಕೂಡ ಮುಟ್ಟಿನ ಹತ್ತಿರದ ಸಂಕೇತ.

ಋತು ಸ್ರಾವಕ್ಕೆ ಮುನ್ನ ಮಕ್ಕಳಲ್ಲಿ ಯೋನಿಯಲ್ಲಿ ಬಿಳಿ, ಹಳದಿ ಬಣ್ಣದ ನೀರಿನಂಶ ಬಿಡುಗಡೆಯಾಗುತ್ತದೆ. ಈ ಮೂಲಕ ದೇಹವು ಹೆಚ್ಚು ಈಸ್ಟ್ರೋಜೆನ್​ ಉತ್ಪಾದಿಸುತ್ತಿದೆ ಎಂಬ ಸಂಕೇತವನ್ನು ನೀಡುತ್ತದೆ. ಇದು ಬಹಳಷ್ಟು ಮಕ್ಕಳಿಗೆ ಆಘಾತ ಅಥವಾ ಕಿರಿಕಿರಿ ಮಾಡುವ ಸಾಧ್ಯತೆ ಹೆಚ್ಚು.

ಮಕ್ಕಳ ಕೆಳ ಹೊಟ್ಟೆಯಲ್ಲಿ ನೋವು, ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು, ಹೊಟ್ಟೆ ಉಬ್ಬುವುದು, ದೇಹದ ಆಕಾರದಲ್ಲಿ ಬದಲಾವಣೆ, ಆಗಾಗ್ಗೆ ಬದಲಾಗುವ ಮನಸ್ಥಿತಿ ಲಕ್ಷಣಗಳು ಕಂಡು ಬರುತ್ತದೆ.

ಒಂದು ವೇಳೆ ಹೆಣ್ಣು ಮಕ್ಕಳು 8 ವರ್ಷಕ್ಕಿಂತ ಮುಂಚೆ ಅಥವಾ 15 ವರ್ಷ ನಂತರವೂ ಋತುಮತಿಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಇದು ಖಂಡಿತವಾಗಿಯೂ ಆತಂಕಕಾರಿ ವಿಚಾರವಾಗಿದೆ.

ಮೊದಲ ಬಾರಿಗೆ ಮುಟ್ಟಾದಾಗ ಸಾಮಾನ್ಯವಾಗಿ ರಕ್ತಸ್ರಾವ ಹೆಚ್ಚಿರುತ್ತದೆ. ಅದರ ಬಗ್ಗೆ ಗಮನ ಕೊಡಬೇಕು. ಆರೋಗ್ಯಕರ ಆಹಾರ ನೀಡಬೇಕು. ಸಾಕಷ್ಟು ವಿಶ್ರಾಂತಿ ನೀಡಬೇಕು.

ಮೊದಲ ಬಾರಿಗೆ ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ರಕ್ತಸ್ರಾವ ಒಂದೆರಡು ದಿನಗಳವರೆಗೆ ಇರುತ್ತದೆ. ಕೆಲವರಿಗೆ ಒಂದು ವಾರದ ಕಾಲ ಕೂಡ ಇರಲಿದೆ. ಋತುಮತಿಯಾದಾಗ ಮೊದಲ 3 ವರ್ಷಗಳ ಕಾಲ ಋತುಚಕ್ರದಲ್ಲಿ ಏರಿಳಿತಗಳು ಕಂಡು ಬರುತ್ತದೆ. 2-3 ತಿಂಗಳಿಗೊಮ್ಮೆ ಋತುಚಕ್ರವಾಗಬಹುದು.

ಸ್ತ್ರೀರೋಗ ತಜ್ಞರನ್ನು ಯಾವಾಗ ಸಂಪರ್ಕಿಸಬೇಕು?

  1. ಏಳು ದಿನಗಳಿಗಿಂತ ಹೆಚ್ಚುಕಾಲ ರಕ್ತಸ್ರಾವವಾದರೆ,
  2. ಎರಡು ಋತುಚಕ್ರಗಳ ನಡುವಿನ ಅಂತರ 20 ದಿನಗಳಿಗಿಂತ ಕಡಿಮೆಯಿದ್ದರೆ.
  3. ತಲೆತಿರುಗುವುದು/ಸುಸ್ತಾಗುತ್ತಿದ್ದರೆ,
  4. ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಂಡರೆ.
  5. ಋತುಮತಿಯಾದ 2-3 ವರ್ಷಗಳ ಬಳಿಕವೂ ಋತುಚಕ್ರದಲ್ಲಿ ಏರುಪೇರಾಗುತ್ತಿದ್ದರೆ.

ಸ್ವಯಂ ಆರೈಕೆ ಹೇಗೆ?

  • ಶಾಲೆಗಳಲ್ಲಿ ಅಥವಾ ಇನ್ನಾವುದೇ ಸ್ಥಳದಲ್ಲಿ ಶೌಚಾಲಯಗಳನ್ನು ಬಳಕೆ ಮಾಡಿದಾಗ ರಕ್ತ ಬೀಳುವುದನ್ನು ಕಂಡರೆ ಅಥವಾ ಧರಿಸಿರುವ ಬಟ್ಟೆಯಲ್ಲಿ ರಕ್ತದ ಕಲೆ ಕಂಡು ಬಂದರೆ, ಟಿಶ್ಯೂ ಪೇಪರ್ ಬಳಸಿ ಸ್ವಚ್ಛಗೊಳಿಸಿಕೊಂಡು ತುರ್ತು ಸಮಯದಲ್ಲಿ ಇದನ್ನೇ ಒಳ ಉಡುಪಿನಲ್ಲಿ ಇಟ್ಟುಕೊಳ್ಳಿ. ನಂತರ ನೀವು ವಿಶ್ವಾಸ ಇಡುವ, ನಂಬಿಕೆಯುಳ್ಳ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ, ಸ್ಯಾನಿಟರಿ ಪ್ಯಾಡ್ ತರಿಸಿಕೊಂಡು ಬಳಕೆ ಮಾಡಿ.
  • ಋತುಚಕ್ರ ಸಮಯದಲ್ಲಿ ಉತ್ತಮವಾದ ಪ್ಯಾಡ್, ಟ್ಯಾಂಪ್ಯೂ ಅಥವಾ ಕಪ್ ಅನ್ನು ಬಳಸಬೇಕು. ಜೊತೆಗೆ ಸರಿಯಾಗಿ ವಿಲೇವಾರಿ ಮಾಡಬೇಕು. ಅದು ರಕ್ತವನ್ನು ಹೀರಿಕೊಳ್ಳಲು ಅಥವಾ ಸಂಗ್ರಹಿಸಲು ಅವಕಾಶ ಮಾಡಿಕೊಡುತ್ತದೆ. ಮುಟ್ಟಿನ ಅವಧಿ ಮುಗಿಯುವವರೆಗೆ ಸಾಕಷ್ಟು ಬಾರಿ ಸೋಪು ಮತ್ತು ನೀರನ್ನು ತೊಳೆಯಲು ಬಳಸಿ.
  • ಅತೀವ್ರ ಹೊಟ್ಟೆ ನೋವಿದ್ದರೆ, ಹಾಟ್ ವಾಟರ್ ಬ್ಯಾಗ್ ಗಳನ್ನು ಹೊಟ್ಟೆಯ ಬಳಿ ಇಟ್ಟುಕೊಳ್ಳಿ. ಬೆಚ್ಚಗಿನ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸಿ. ಅತೀವ್ರ ನೋವಿದ್ದರೆ, ಪ್ಯಾರಾಸಿಟಮೋಲ್ ಮಾತ್ರೆಗಳನ್ನು ತೆಗೆದುಕೊಳ್ಳಿ.

ಸ್ವಚ್ಛತೆ ಅತ್ಯಗತ್ಯ...

  • ಋತುಮತಿಯಾದ ಸಂದರ್ಭದಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾಗುತ್ತದೆ. ಪ್ರತೀ 3-4 ಗಂಟೆಗಳಿಗೊಮ್ಮೆ ಪ್ಯಾಡ್ ಗಳನ್ನು ಬದಲಾಯಿಸಿ. ಒಂದು ವೇಳೆ ಪ್ಯಾಡ್ ಸಂಪೂರ್ಣವಾಗಿ ನೆನೆಯದಿದ್ದಲ್ಲಿ ಮರೆಯದೆ 6-8 ಗಂಟೆಗಳಿಗೊಮ್ಮೆ ಬದಲಾಯಿಸಿ.
  • ಸದಾಕಾಲ ನಿಮ್ಮೊಂದಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಇಟ್ಟುಕೊಂಡಿರಿ.
  • ಶೌಚಾಲಯ ಬಳಕೆ ಮಾಡುವ ಸಂದರ್ಭದಲ್ಲಿ ಯೋನಿಯ ಬಾಹ್ಯ ಭಾಗದಲ್ಲಿ ತೊಳೆಯುತ್ತಿರಿ. ಒಳಭಾಗದಲ್ಲಿ ಸ್ವಚ್ಛಗೊಳಿಸಲು ಹೋಗದಿರಿ, ಹೀಗೆ ಮಾಡಿದ್ದೇ ಆದರೆ, ಸೋಂಕುಗಳು ಎದುರಾಗಬಹುದು.
  • ಪೀರಿಯಡ್ಸ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಆ್ಯಪ್ ಗಳನ್ನು ಬಳಸಿ.
  • ಋತುಮತಿ ಆದ ಕೂಡಲೇ ಗರ್ಭಿಣಿಯಾಗಬಹುದು. ಮುಟ್ಟಿಗೆ ಮುಂಚೆಯೂ ಗರ್ಭಿಣಿ ಆಗಲೂಬಹುದು. ಏಕೆಂದರೆ ಹಾರ್ಮೋನ್‍ಗಳು ಈಗಾಗಲೇ ಸಕ್ರೀಯವಾಗಿರುವುದರಿಂದ ಹಾರ್ಮೋನ್‍ಗಳು ಅಂಡೋತ್ಪತ್ತಿಗೆ ಮತ್ತು ಗರ್ಭಾಶಯದ ನಿರ್ಮಾಣಕ್ಕೆ ಕಾರಣವಾಗಬಹುದು.
  • ಜೀವನದ ಎಲ್ಲಾ ಮೊದಲ ಅನುಭವಗಳಂತೆಯೇ ಋತುಮತಿಯಾಗುವುದು ಕೂಡ ಮೊದಲ ಅನುಭವವಾಗಿರುತ್ತದೆ. ಆದರೆ, ಈ ಹಂತ ಕೆಲವು ಹೆಣ್ಣು ಮಕ್ಕಳಲ್ಲಿ ಭಯ, ಮಾನಸಿಕ ಖಿನ್ನತೆಗಳನ್ನುಂಟು ಮಾಡಬಹುದು. ಈ ಸಂದರ್ಭದಲ್ಲಿ ಪೋಷಕರು ಮುಖ್ಯವಾಗಿ ತಾಯಿ ಹೆಣ್ಣು ಮಕ್ಕಳಿಗೆ ಮಾನಸಿಕ ಸ್ಥೈರ್ಯ, ಅರಿವು ಮೂಡಿಸುವ ಕೆಲಸ ಮಾಡುವುದು ಅತ್ಯಗತ್ಯವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com