Foods To Avoid After Chicken: ಚಿಕನ್ (Chicken) ಅಂದ್ರೆ ಪ್ರೋಟೀನ್‌ನ ಪವರ್ ಹೌಸ್ ಅಂತ ಎಲ್ಲರಿಗೂ ಗೊತ್ತು! ಆದರೆ ಹೊಟ್ಟೆ ತುಂಬ ತಿಂದ ತಕ್ಷಣ ಕೆಲವು ಆಹಾರ ಸೇರಿಸಿದರೆ ಜೀರ್ಣಕ್ರಿಯೆ (Digestion) ಹಾಳಾಗಿ ಗ್ಯಾಸ್, ಉಬ್ಬರ, ಅಸಿಡಿಟಿ ಬರಬಹುದು. ಅದ್ರಲ್ಲೂ ತಜ್ಞರ ಪ್ರಕಾರ ಕೋಳಿಯ ಜೊತೆ ಕೆಲವು ಕಾಂಬಿನೇಷನ್ ದೇಹಕ್ಕೆ ಒಗ್ಗುವುದಿಲ್ಲ. ಹಾಗಾಗಿ, ಚಿಕನ್ (ಕೋಳಿ ಮಾಂಸ) ತಿಂದ ನಂತರ ಯಾವ ಆಹಾರಗಳನ್ನ (Foods) ಅಪ್ಪಿತಪ್ಪಿಯೂ ತಿನ್ನಬಾರದು ಅಂತ ಗೊತ್ತಾ? ಯಾಕಂದ್ರೆ, ತಪ್ಪಾದ ಕಾಂಬಿನೇಷನ್‌ನಿಂದ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಹೌದು, ಕೋಳಿ ಮಾಂಸದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಕೊಬ್ಬಿನಂಶ ಇರುತ್ತದೆ. ಅದ್ರಂತೆ, ಇದು ಜೀರ್ಣವಾಗಲು ಹೊಟ್ಟೆಗೆ ಸುಮಾರು 3 ರಿಂದ 4 ಗಂಟೆ ಸಮಯ ಬೇಕು. ಹಾಗಾಗಿ, ಈ ಸಮಯದಲ್ಲಿ ಕೆಲವೊಂದು ಆಹಾರವನ್ನು ಸೇವಿಸಿದ್ರೆ, ಜೀರ್ಣಕ್ರಿಯೆ ನಿಧಾನಗೊಂಡು ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಚರ್ಮದ ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ, ಆ ಆಹಾರಗಳು ಯಾವುವು?
ಹಾಲು-ಮೊಸರು-ಪನ್ನೀರ್ ಬೇಡ
ವರದಿಗಳ ಪ್ರಕಾರ ಕೋಳಿ ಮಾಂಸದ ಜೊತೆಗೆ ಅಥವಾ ತಿಂದ ತಕ್ಷಣ ಹಾಲು, ಮೊಸರು, ಮಜ್ಜಿಗೆ, ಪನ್ನೀರ್‌ನಂತಹ ಡೈರಿ ಉತ್ಪನ್ನಗಳನ್ನು ತಿನ್ನುವುದು ಸರಿಯಲ್ಲ. ಯಾಕಂದ್ರೆ ಕೋಳಿಯಲ್ಲಿ ಪ್ರೋಟೀನ್ ಅಧಿಕ, ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಕೇಸಿನ್ ಅಧಿಕ. ಎರಡು ವಿಭಿನ್ನ ಪ್ರೋಟೀನ್‌ಗಳು ಒಟ್ಟಿಗೆ ಜೀರ್ಣವಾಗಲು ಹೆಚ್ಚು ಶಕ್ತಿ ಬೇಕು. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಉಂಟಾಗಬಹುದು. ವಿಶೇಷವಾಗಿ ಜೀರ್ಣ ಶಕ್ತಿ ಕಡಿಮೆ ಇರುವವರು ಚಿಕನ್ ಊಟದ ನಂತರ ಕನಿಷ್ಠ 2 ರಿಂದ 3 ಗಂಟೆ ಡೈರಿ ತಪ್ಪಿಸಬೇಕು.
ಈ ಹಣ್ಣುಗಳು ಬೇಡ
ಊಟದ ನಂತರ ನಿಂಬೆಹಣ್ಣು, ಕಿತ್ತಳೆಹಣ್ಣು, ಮೋಸಂಬಿಹಣ್ಣು, ದ್ರಾಕ್ಷಿ ಹಣ್ಣಿನ ಜ್ಯೂಸ್ ಕುಡಿದರೆ ಫ್ರೆಶ್ ಅನಿಸುತ್ತದೆ ಎಂದುಕೊಳ್ಳುತ್ತೇವೆ. ಆದರೆ ಕೋಳಿ ಮಾಂಸ ಈಗಾಗಲೇ ಆಮ್ಲೀಯ ವಾತಾವರಣ ಸೃಷ್ಟಿಸಿರುತ್ತದೆ. ಅದರ ಮೇಲೆ ಸಿಟ್ರಸ್ ಹಣ್ಣಿನ ಆಮ್ಲ ಸೇರಿದರೆ ಎದೆಯುರಿ ಮತ್ತು ಅಸಿಡಿಟಿ ಹೆಚ್ಚಾಗುತ್ತದೆ. ಹಾಗಾಗಿ, ಪೌಷ್ಟಿಕತಜ್ಞರು ಚಿಕನ್ ಊಟದ ನಂತರ ಕನಿಷ್ಠ ಒಂದು ಗಂಟೆ ಆಮ್ಲೀಯ ಹಣ್ಣುಗಳನ್ನು ತಪ್ಪಿಸಲು ಸೂಚಿಸುತ್ತಾರೆ.
ಸಕ್ಕರ ಹೆಚ್ಚಿರುವ ತಿಂಡಿ ಬೇಡ
ಚಿಕನ್ ಬಿರಿಯಾನಿ ನಂತರ ಗುಲಾಬ್ ಜಾಮೂನ್, ಐಸ್‌ಕ್ರೀಮ್, ಕೇಕ್ ಅಥವಾ ಸಕ್ಕರೆ ಹೆಚ್ಚಿರುವ ಕೂಲ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಅನೇಕರಿಗೆ ಇದೆ. ಆದರೆ, ಹೆಚ್ಚಿನ ಸಕ್ಕರೆ ರಕ್ತದಲ್ಲಿ ಗ್ಲೂಕೋಸ್ ಅನ್ನು ಏಕಾಏಕಿ ಹೆಚ್ಚಿಸಿ ನಂತರ ಬೇಗನೆ ಇಳಿಸುತ್ತದೆ. ಇದು ಆಯಾಸ, ನಿದ್ರೆ ಮತ್ತು ಅಲಸ್ಯ ತರುತ್ತದೆ. ಸಕ್ಕರೆ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಕೋಳಿಯ ಕೊಬ್ಬಿನ ಜೊತೆ ಸೇರಿ ಹೊಟ್ಟೆಯಲ್ಲಿ ಭಾರ ಉಂಟುಮಾಡುತ್ತದೆ.
ಇಂತಹ ಸ್ನಾಕ್ಸ್ ಕೂಡ ಬೇಡ
ಚಿಕನ್ ಫ್ರೈ ಜೊತೆ ಪಕೋಡ, ಬಜ್ಜಿ, ಚಿಪ್ಸ್, ಫ್ರೆಂಚ್ ಫ್ರೈಸ್ ತಿನ್ನುವುದು ಕೊಬ್ಬಿನ ಅಂಶಕ್ಕೆ ಕೊಬ್ಬಿನ ಅಂಶ ಸೇರಿಸಿದಂತೆ. ಯಾಕಂದ್ರೆ ಕೋಳಿ ಮಾಂಸವೇ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅದರ ಜೊತೆಗೆ ಹೆಚ್ಚಿನ ಎಣ್ಣೆಯುಕ್ತ ಆಹಾರ ಸೇರಿದರೆ ಲಿವರ್ ಮೇಲೆ ಒತ್ತಡ ಹೆಚ್ಚಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ದೀರ್ಘಕಾಲದಲ್ಲಿ ಫ್ಯಾಟಿ ಲಿವರ್ ಅಪಾಯ ಹೆಚ್ಚಾಗುತ್ತದೆ.
ಹಾಗಾದ್ರೆ, ಸರಿಯಾದ ಟೈಮ್ ಯಾವುದು?
ಚಿಕನ್ ತಿಂದ ನಂತರ ಕನಿಷ್ಠ 30 ನಿಮಿಷ ಏನೂ ತಿನ್ನದೆ ಬಿಸಿ ನೀರು ಕುಡಿಯಿರಿ. ನಂತರ ಬೇಕಿದ್ದರೆ ಜೀರಿಗೆ ನೀರು, ಸೋಂಪು ನೀರು ಅಥವಾ ಎಳನೀರು ಕುಡಿಯಬಹುದು. ಇದರೊಂದಿಗೆ ಊಟದ ಜೊತೆ ಸಲಾಡ್, ಸೌತೆಕಾಯಿ, ಕ್ಯಾರೆಟ್‌ನಂತಹ ಹಗುರವಾದ ಫೈಬರ್ ಇರಲಿ. ರಾತ್ರಿ ಚಿಕನ್ ತಿಂದರೆ ಮಲಗುವ ಮುನ್ನ 3 ಗಂಟೆ ಅಂತರ ಇರಲಿ.