Home Hacks: ರಾತ್ರಿ ಮಲಗುವಾಗ ಸೊಳ್ಳೆಗಳ ಕಾಟದಿಂದ ನಿದ್ದೆಯೇ ಹಾಳಾಗುತ್ತಿದೆಯೇ. ಕಾಯಿಲ್, ಮ್ಯಾಟ್ ಮತ್ತು ಸ್ಪ್ರೇಗಳಿಂದ ಬೇಸತ್ತಿದ್ದೀರಾ. ಅವುಗಳ ವಾಸನೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಆದರೆ ಅಡುಗೆ ಮನೆಯಲ್ಲಿರುವ ಒಂದೇ ನಿಂಬೆಹಣ್ಣಿನಿಂದ ಸೊಳ್ಳೆಗಳನ್ನು ಓಡಿಸಬಹುದು. ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ ನೋಡಿ, ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಸೊಳ್ಳೆಗಳು ರಾತ್ರಿ ವೇಳೆ ಯಾಕೆ ಹೆಚ್ಚು?
ಸೊಳ್ಳೆಗಳು ಮನುಷ್ಯನ ದೇಹದ ಬೆವರು, ಉಸಿರಿನ ಇಂಗಾಲದ ಡೈಆಕ್ಸೈಡ್ ಮತ್ತು ಬೆಳಕಿಗೆ ಆಕರ್ಷಿತವಾಗುತ್ತವೆ. ಸಂಜೆ ವೇಳೆ ಕಿಟಕಿ ಬಾಗಿಲು ತೆರೆದಿರುವುದು, ಮನೆ ಸುತ್ತ ನಿಂತ ನೀರು, ಹೂವಿನ ಕುಂಡದ ತಟ್ಟೆ ಮತ್ತು ಫ್ರಿಡ್ಜ್ ಟ್ರೇಗಳಲ್ಲಿ ನೀರು ಇರುವುದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲ ವಾಗುತ್ತದೆ. ಅದರಲ್ಲೂ, ರಾತ್ರಿ ದೇಹದ ಉಷ್ಣತೆ ಹೆಚ್ಚಿರುವಾಗ ಸೊಳ್ಳೆ ಕಡಿಯುವ ಸಾಧ್ಯತೆ ಇನ್ನೂ ಹೆಚ್ಚು.!
ಹಾಗಾದ್ರೆ, ಏನು ಮಾಡಬೇಕು?
ಈ ಟ್ರಿಕ್ ಗೆ ನಿಮಗೆ ಬೇಕಾಗಿರುವುದು ಒಂದೇ ಒಂದು ನಿಂಬೆಹಣ್ಣು ಮತ್ತು ಸ್ವಲ್ಪ ಲವಂಗ. ಮೊದಲು ಒಂದು ತಾಜಾ ನಿಂಬೆಹಣ್ಣನ್ನು ಅಡ್ಡಲಾಗಿ ಎರಡು ಭಾಗ ಮಾಡಿ. ಪ್ರತಿ ಭಾಗದ ತಿರುಳಿನ ಮೇಲೆ ಲವಂಗಗಳನ್ನು ಚುಚ್ಚಿ. ಲವಂಗದ ತುದಿ ಮೇಲ್ಮುಖವಾಗಿ ಇರುವಂತೆ ನೋಡಿಕೊಳ್ಳಿ. ಇದನ್ನು ಒಂದು ಸಣ್ಣ ತಟ್ಟೆಯಲ್ಲಿ ಇಟ್ಟು ಮಲಗುವ ಕೋಣೆಯ ಮೂಲೆಯಲ್ಲಿ, ಕಿಟಕಿ ಬಳಿ ಅಥವಾ ಬಾಗಿಲಿನ ಪಕ್ಕದಲ್ಲಿ ಇಡಬೇಕು. ಹೊರಾಂಗಣ ಅಥವಾ ಬಾಲ್ಕನಿಯಲ್ಲಿ ಲವಂಗದ ತುದಿಗೆ ಸಣ್ಣದಾಗಿ ಬೆಂಕಿ ಕೊಟ್ಟರೆ ಬರುವ ಹೊಗೆ ಸೊಳ್ಳೆಗಳನ್ನು ತಕ್ಷಣ ದೂರ ಮಾಡುತ್ತದೆ, ಆದರೆ ಮನೆಯ ಒಳಗೆ ಈ ಹೊಗೆ ವಿಧಾನ ಮಾಡಬಾರದು.
ಇದು ಕೆಲಸ ಮಾಡುವುದು ಹೇಗೆ?
ನಿಂಬೆಹಣ್ಣು ಮತ್ತು ಲವಂಗ ಎರಡರಲ್ಲೂ ಬಲವಾದ ವಾಸನೆ ಇರುತ್ತದೆ. ಈ ಎರಡರ ವಾಸನೆಯ ಸಂಯೋಜನೆಯನ್ನು ಸೊಳ್ಳೆಗಳಿಗೆ ಸಹಿಸಲು ಆಗುವುದಿಲ್ಲ. ನಿಂಬೆಯಲ್ಲಿರುವ ಸಿಟ್ರಸ್ ಅಂಶ ಮತ್ತು ಲವಂಗದಲ್ಲಿರುವ ಯುಜೆನಾಲ್ ಅಂಶ ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಈ ವಾಸನೆ ಮನುಷ್ಯರಿಗೆ ಇಷ್ಟವಾಗುತ್ತದೆ ಆದರೆ ಸೊಳ್ಳೆಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ.
ಮುಂದುವರೆದು, ಈ ನಿಂಬೆ ಲವಂಗದ ತಟ್ಟೆಯ ಪರಿಣಾಮ ಒಂದು ರಿಂದ ಎರಡು ದಿನ ಮಾತ್ರ ಇರುತ್ತದೆ. ನಂತರ ನಿಂಬೆಹಣ್ಣು ಒಣಗಿ ಪರಿಮಳ ಕಡಿಮೆಯಾಗುತ್ತದೆ, ಆದ್ದರಿಂದ ಪ್ರತಿ ಎರಡು ದಿನಕ್ಕೊಮ್ಮೆ ಹೊಸದನ್ನು ಮಾಡಬೇಕು. ಇದು ಸಂಪೂರ್ಣ ರಕ್ಷಣೆ ನೀಡುವುದಿಲ್ಲ, ವಿಶೇಷವಾಗಿ ಡೆಂಗ್ಯೂ ಹರಡುವ ಏಡಿಸ್ ಸೊಳ್ಳೆಗಳ ವಿರುದ್ಧ ಕೇವಲ ಇದನ್ನೇ ನಂಬಬಾರದು. ಆದ್ದರಿಂದ ಮನೆ ಸುತ್ತ ನಿಂತ ನೀರನ್ನು ತೆಗೆಯುವುದು, ಸೊಳ್ಳೆ ಪರದೆ ಬಳಕೆ ಮತ್ತು ಕಿಟಕಿಗೆ ಜಾಲಿ ಹಾಕುವುದು ಅಗತ್ಯ. ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಎತ್ತರದ ಸ್ಥಳದಲ್ಲಿ ಇಡಬೇಕು ಮತ್ತು ನೇರವಾಗಿ ಚರ್ಮಕ್ಕೆ ರಸ ಹಚ್ಚಬಾರದು.
ಇತರೆ ಪ್ರಯೋಜನಗಳು:
ಇದು ಸೊಳ್ಳೆಗಳನ್ನು ಓಡಿಸುವುದಲ್ಲದೆ ರೂಮಿನ ಕೆಟ್ಟ ವಾಸನೆಯನ್ನು ಹೋಗಲಾಡಿಸಿ ತಾಜಾ ಪರಿಮಳವನ್ನು ನೀಡುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಚಿಕ್ಕ ಮಕ್ಕಳಿರುವ ಮನೆಯಲ್ಲೂ ಇದನ್ನು ಸುರಕ್ಷಿತವಾಗಿ ಬಳಸಬಹುದು. ದುಬಾರಿ ಕಾಯಿಲ್ ಗಳಿಗಿಂತ ಇದು ಅಗ್ಗ ಮತ್ತು ಸುರಕ್ಷಿತ.