

Dark Jeans Washing Tips: ಅಂಗಡಿಗೆ ಹೋದಾಗ ಯಾವುದಾದರೂ ಡಾರ್ಕ್ ಜೀನ್ಸ್ ಪ್ಯಾಂಟ್ ಇಷ್ಟ ಆಯ್ತು ಅಂದರೆ ಅದನ್ನ ಆಸೆಪಟ್ಟು ಖರೀದಿಸಿರುತ್ತೇವೆ. ಆದರೆ ಒಂದೆರಡು ಬಾರಿ ವಾಶ್ ಮಾಡಿದ ಕೂಡಲೇ ಅದರ ಅಸಲಿ ಕಳೆ ಕಳೆದುಹೋಗಿ, ಹಳೆಯ ಬಟ್ಟೆಯಂತೆ ಕಾಣಲು ಶುರುವಾಗುತ್ತದೆ. ಅದರಲ್ಲೂ, ಜಾಸ್ತಿ ಹಣ ಕೊಟ್ಟು ತಂದ ಜೀನ್ಸ್ ಕೆಲವೇ ದಿನಗಳಲ್ಲಿ ಬಣ್ಣಗೆಡುವುದನ್ನು ನೋಡಿದರೆ ಯಾರಿಗಾದರೂ ಬೇಸರವಾಗುವುದು ಸಹಜ.! ಆದರೆ ನಿಮಗೆ ಗೊತ್ತಾ, ಬಟ್ಟೆ ತೊಳೆಯುವ ವಿಧಾನದಲ್ಲಿ ಮಾಡುವ ಸಣ್ಣ ತಪ್ಪುಗಳೇ ಇದಕ್ಕೆ ಮುಖ್ಯ ಕಾರಣ ಎಂದು? ಹೌದು, ನಿಮ್ಮ ನೆಚ್ಚಿನ ಕಡು ಬಣ್ಣದ ಜೀನ್ಸ್ ಯಾವಾಗಲೂ ಶೋರೂಮ್‌ನಿಂದ ತಂದಷ್ಟೇ ಹೊಸದಾಗಿ, ಹೊಳಪಿನಿಂದ ಕೂಡಿರಬೇಕೆಂದರೆ ನೀವು ವಾಶ್ ಮಾಡುವಾಗ ಈ ಸರಳ ಮನೆಮದ್ದುಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಸಾಕು. ಆ ಕುರಿತ ವರದಿ ಇಲ್ಲಿದೆ:
ಮೊದಲ ಬಾರಿ ಒಗೆಯುವಾಗ ಉಪ್ಪು ಬಳಸಿ
ಹೊಸ ಜೀನ್ಸ್ ತಂದ ತಕ್ಷಣ ಮೊದಲು ಒಗೆಯುವಾಗ, ಒಂದು ಬಕೆಟ್ ತಣ್ಣೀರಿಗೆ ಅರ್ಧ ಕಪ್ ಬಿಳಿ ವಿನೆಗರ್ ಅಥವಾ 2 ಚಮಚ ಅಡುಗೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಅದರಲ್ಲಿ ಜೀನ್ಸ್ ಅನ್ನು 1 ಗಂಟೆಗಳ ಕಾಲ ನೆನೆಸಿಟ್ಟು, ನಂತರ ತೊಳೆಯಿರಿ. ಇದು ಬಣ್ಣವನ್ನು ಬಟ್ಟೆಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.
ಜೀನ್ಸ್ ಅನ್ನು ಉಲ್ಟಾ ಮಾಡಿ ಒಗೆಯಿರಿ
ವಾಷಿಂಗ್ ಮೆಷಿನ್ ಅಥವಾ ಕೈನಲ್ಲೇ ಒಗೆಯುವುದಿದ್ದರೂ, ಜೀನ್ಸ್ ಅನ್ನು ಯಾವಾಗಲೂ ಉಲ್ಟಾ ಮಾಡಿ (ಒಳಗಿನ ಭಾಗ ಹೊರಗೆ ಬರುವಂತೆ) ಒಗೆಯಬೇಕು. ಇದರಿಂದ ಜೀನ್ಸ್‌ನ ಹೊರಭಾಗದ ಡಾರ್ಕ್ ಬಣ್ಣ ಮಸುಕಾಗುವುದಿಲ್ಲ.
ತಣ್ಣೀರನ್ನು ಮಾತ್ರ ಬಳಸಿ
ಬಿಸಿ ನೀರು ಜೀನ್ಸ್‌ನ ನೂಲುಗಳನ್ನು ಸಡಿಲಗೊಳಿಸಿ ಬಣ್ಣ ಬೇಗನೆ ಹೊರಹೋಗುವಂತೆ ಮಾಡುತ್ತದೆ. ಆದ್ದರಿಂದ ಜೀನ್ಸ್ ತೊಳೆಯಲು ಯಾವಾಗಲೂ ತಣ್ಣೀರನ್ನು ಮಾತ್ರ ಬಳಸಿ.
ಮೃದುವಾದ ಡಿಟರ್ಜೆಂಟ್ ಬಳಸಿ
ಹೆಚ್ಚು ಬ್ಲೀಚ್ ಅಥವಾ ಕಠಿಣ ರಾಸಾಯನಿಕಗಳಿರುವ ವಾಷಿಂಗ್ ಪೌಡರ್ ಬಳಸಬೇಡಿ. ಕಪ್ಪು ಅಥವಾ ಡಾರ್ಕ್ ಬಟ್ಟೆಗಳಿಗಾಗಿಯೇ ಸಿಗುವ ಲಿಕ್ವಿಡ್ ಡಿಟರ್ಜೆಂಟ್ ಬಳಸಿ. ಇದು ಬಣ್ಣವನ್ನು ರಕ್ಷಿಸುತ್ತದೆ.
ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಡಿ
ತೊಳೆದ ಜೀನ್ಸ್ ಅನ್ನು ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದರಿಂದ ಸೂರ್ಯನ ಯುವಿ ಕಿರಣಗಳು ಬಣ್ಣವನ್ನು ಬೇಗನೆ ಹಾರಿಸಿಬಿಡುತ್ತವೆ. ಹಾಗಾಗಿ, ಜೀನ್ಸ್ ಅನ್ನು ಯಾವಾಗಲೂ ನೆರಳಿನಲ್ಲಿ ಅಥವಾ ಗಾಳಿ ಆಡುವ ಜಾಗದಲ್ಲಿ ಉಲ್ಟಾ ಸ್ಥಿತಿಯಲ್ಲೇ ಒಣಗಲು ಹಾಕಿ.
ಪದೇ ಪದೇ ಒಗೆಯಬೇಡಿ
ಜೀನ್ಸ್ ಪ್ಯಾಂಟ್‌ಗಳನ್ನು ಪ್ರತೀ ಬಾರಿ ಧರಿಸಿದ ತಕ್ಷಣ ಒಗೆಯುವ ಅಗತ್ಯವಿಲ್ಲ. ಕನಿಷ್ಠ 4 ರಿಂದ 5 ಬಾರಿ ಧರಿಸಿದ ನಂತರ ಒಗೆಯಿರಿ. ಇದರೊಂದಿಗೆ, ಸಣ್ಣಪುಟ್ಟ ಕಲೆಗಳಾಗಿದ್ದರೆ ಇಡೀ ಜೀನ್ಸ್ ಒಗೆಯುವ ಬದಲು, ಕಲೆಯಾದ ಜಾಗವನ್ನು ಮಾತ್ರ ಒದ್ದೆ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.
ಕೈತೊಳೆಯುವಿಕೆ ಮತ್ತು ನೆರಳಿನಲ್ಲಿ ಒಣಗಿಸುವುದು
ಮೆಷಿನ್‌ನಲ್ಲಿ ಅತಿಯಾಗಿ ತಿರುಗಿಸುವುದರಿಂದ ಬಟ್ಟೆ ಬೇಗ ಹಾಳಾಗುತ್ತದೆ. ಸಾಧ್ಯವಾದರೆ ಕೈಯಲ್ಲೇ ನಿಧಾನವಾಗಿ ತೊಳೆಯಿರಿ, ಅಥವಾ ಮೆಷಿನ್‌ನಲ್ಲಿ ಜೆಂಟಲ್ ಮೋಡ್ ಆಯ್ಕೆಮಾಡಿ. ತೊಳೆದ ನಂತರ ನೇರ ಬಿಸಿಲಿನಲ್ಲಿ ಒಣಗಿಸದೆ, ನೆರಳಿರುವ ಗಾಳಿಯಾಡುವ ಜಾಗದಲ್ಲಿ ಒಣಗಿಸಿದರೆ ಬಣ್ಣ ಮಸುಕಾಗುವುದಿಲ್ಲ.