ರೈಲಲ್ಲಿ ಕಾಮುಕರ ಅಟ್ಟಹಾಸ

ನವದೆಹಲಿ: ಬೇಲಿಯೇ ಎದ್ದು ಹೊಲ ಮೇಯ್ದಂತಹ ಪ್ರಕರಣ ಬಿಹಾರದಲ್ಲಿ ನಡೆದಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ರೇಲ್ವೆ ನೌಕರರೇ ಕಿರುಕುಳ ನೀಡಿದ್ದಾರೆ. ಘಟನೆಯಿಂದಾಗಿ ಬಿಜೆಪಿ ಶಾಸಕ ಶಿವೇಶ್ ಕುಮಾರ್, ಅವರ ಪತ್ನಿ ಹಾಗೂ 6 ತಿಂಗಳ ಮಗು ಗಂಭೀರ ಗಾಯಗೊಂಡಿದ್ದಾರೆ.
18 ಮಂದಿ ದುಷ್ಕರ್ಮಿಗಳ ಕೃತ್ಯ: ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ದಾನಾಪುರ-ಹೌರಾ ಎಕ್ಸ್ಪ್ರೆಸ್ನಲ್ಲಿ ಶಿವೇಶ್ ಕುಮಾರ್ ತನ್ನ ಮಗು ಹಾಗೂ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ರೈಲು ರಾಜೇಂದ್ರನಗರ ತಲುಪುತ್ತಿದ್ದಂತೆಯೇ 17-18 ಮಂದಿ ರೈಲನ್ನೇರಿದ್ದಾರೆ. ಶಿವೇಶ್ ಅವರಿದ್ದ ಸೀಟಿನ ಎದುರುಗಡೆ ಬಂದು ಕೂತು, ದಂಪತಿಯ ಬಗ್ಗೆ ಅಶ್ಲೀಲ ಮಾತುಗಳನ್ನಾಡಲು ಆರಂಭಿಸಿದ್ದಾರೆ.
ಟಿಟಿಇ ನಿರ್ಲಕ್ಷ್ಯ: ಈ ವೇಳೆ, ಶಿವೇಶ್ ಕುಮಾರ್ ರೇಲ್ವೆಯ ಟಿಟಿಇಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ರೈಲು ಹತ್ತಿದ 18 ಮಂದಿಯೂ ರೇಲ್ವೆಯ ನೌಕರರು. ಹಾಗಾಗಿ ಏನೂ ಸಮಸ್ಯೆಯಿಲ್ಲ ಎಂದು ಹೇಳಿ ಟಿಟಿಇ ಕರೆ ಕಟ್ ಮಾಡಿದ್ದಾರೆ. ಆದರೆ, ರೈಲಿನೊಳಗೆ ಈ ದುಷ್ಕರ್ಮಿಗಳ ಕೃತ್ಯ ಮಿತಿಮೀರಿದ್ದು, ಅವರು ಮದ್ಯಸೇವನೆ ಮಾಡಿ ಅಶ್ಲೀಲ ಮಾತುಗಳನ್ನು ಮುಂದುವರಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಶಾಸಕನ ಮೇಲೆ ಹಲ್ಲೆ ನಡೆಸಿದ್ದು, ಮಗುವಿಗೂ ಗಾಯಗಳಾಗಿವೆ. ಜತೆಗೆ ಶಾಸಕನ ಪತ್ನಿ ಮೇಲೆ ವಿಸ್ಕಿ ಸುರಿದು ಲೈಂಗಿಕ ಕಿರುಕುಳ ನೀಡಿದ್ದಾರೆ. ಬೇರೆ ದಾರಿಯಿಲ್ಲದೆ ಶಾಸಕ ಕೊನೆಗೆ ರೈಲಿನ ಅಲಾರಂ ಚೈನ್ ಎಳೆದಿದ್ದಾರೆ. ಆದರೆ, ರೈಲು ನಿಲ್ಲಿಸಿದ್ದಕ್ಕಾಗಿ ಟಿಟಿಇ ಹಾಗೂ ಇತರರು ಶಾಸಕನ ಮೇಲೆಯೇ ಹರಿಹಾಯ್ದಿದ್ದಾರೆ.
ಸಹಾಯವಾಣಿಗೆ ಕರೆ: ಈ ವೇಳೆ ಜಾಣ್ಮೆ ತೋರಿದ ಶಾಸಕನ ಪತ್ನಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ರೈಲು ಮುಂದಿನ ನಿಲ್ದಾಣ ತಲುಪುವಾಗ ಪೊಲೀಸರು ತಡೆದು ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಇವರಲ್ಲಿ ಐವರನ್ನು ಅಮಾನತು ಮಾಡಲಾಗಿದೆ. 18 ಮಂದಿ ದುಷ್ಕರ್ಮಿಗಳು ಟಿಕೆಟ್ ಅನ್ನೂ ಹೊಂದಿರಲಿಲ್ಲ. ಟಿಟಿಇಗಳ ಜತೆಗೆ ಸಂಪರ್ಕ ಹೊಂದಿ ಅಕ್ರಮವಾಗಿ ರೈಲಲ್ಲಿ ಸಂಚರಿಸಿದ್ದರು ಎಂದು ರೇಲ್ವೆ ಮೂಲಗಳು ತಿಳಿಸಿವೆ.
ಎರಡು ವರ್ಷ- 68 ಸಾವಿರ ರೇಪ್!
2009-11ರ ಅವಧಿಯಲ್ಲಿ ದೇಶಾದ್ಯಂತ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 68 ಸಾವಿರ. ಆದರೆ, ಶಿಕ್ಷೆಯಾಗಿದ್ದು ಕೇವಲ 16 ಸಾವಿರ ಮಂದಿಗೆ ಮಾತ್ರ. ಮಹಿಳೆಯರ ಮೇಲಿನ ಲೈಂಗಿಕ ಹಲ್ಲೆಯಂತಹ ಪ್ರಕರಣಗಳಿಗೆ ದೇಶದಲ್ಲಿ ಯಾವ ರೀತಿ ನ್ಯಾಯ ಸಿಗುತ್ತಿದೆ ಎನ್ನುವುದಕ್ಕೆ ಈ ಅಂಕಿ ಅಂಶ ಕನ್ನಡಿ ಹಿಡಿದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಈ ಅಂಕಿಅಂಶವನ್ನು ಬಹಿರಂಗಪಡಿಸಿದೆ.
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು: ವರದಿ ಹೇಳುವಂತೆ, 2011ರಲ್ಲಿ ದೇಶದಲ್ಲಿ 24,206 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 5,724 ಮಂದಿಗೆ ಶಿಕ್ಷೆಯಾಗಿದೆ. ಅಂತೆಯೇ 2010ರಲ್ಲಿ 22,172 ರೇಪ್ ಕೇಸ್ ದಾಖಲಾಗಿದ್ದು, 5,632 ಮಂದಿ ಮಾತ್ರ ತಪ್ಪಿತಸ್ಥರೆಂದು ತೀರ್ಪು ಬಂದಿದೆ. 2009-11ರ ಅವಧಿಯಲ್ಲಿ ಅತಿ ಹೆಚ್ಚು ರೇಪ್ ಪ್ರಕರಣ ನಡೆದಿದ್ದು ಮಧ್ಯಪ್ರದೇಶದಲ್ಲಿ. ಇಲ್ಲಿ 9,539 ಪ್ರಕರಣ ದಾಖಲಾಗಿದ್ದು, 2,986 ಮಂದಿಗೆ ಮಾತ್ರ ಶಿಕ್ಷೆಯಾಗಿದೆಯಂತೆ. ಅತಿ ಹೆಚ್ಚು ಪ್ರಕರಣಗಳು ನಡೆದರೂ ಶಿಕ್ಷೆಗೊಳಪಡುತ್ತಿರುವವರ ಪ್ರಮಾಣ ಕಡಿಮೆ. ಇದಕ್ಕೆ ಕಾರಣ ಪೊಲೀಸರು ತನಿಖೆಯತ್ತ ಆಸಕ್ತಿ ವಹಿಸದಿರುವುದು. ಇದರಿಂದಾಗಿ ಪ್ರಾಸಿಕ್ಯೂಷನ್ಗೆ ಸಾಕ್ಷ್ಯಗಳ ಕೊರತೆ ಉಂಟಾಗುತ್ತಿದೆ ಎನ್ನುತ್ತಾರೆ ಗೃಹ ಸಚಿವಾಲಯದ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


