ದೇಶ

ಗದ್ದಲದಲ್ಲೇ ಮುಗಿಯಿತು ಮೊದಲರ್ಧ ಅಧಿವೇಶನ

Published On :

ನವದೆಹಲಿ: ಶ್ರೀಲಂಕಾ ತಮಿಳರ ವಿವಾದ, ತೆಲಂಗಾಣ ಹೋರಾಟಗಾರರ ವಿರುದ್ಧ ಪೊಲೀಸರ ದೌರ್ಜನ್ಯ ಮತ್ತಿತರ ಗದ್ದಲದಿಂದಲೇ ಶುಕ್ರವಾರ ಸಂಸತ್‌ನ ಮೊದಲರ್ಧದ ಬಜೆಟ್ ಅಧಿವೇಶನ ಕೊನೆಗೊಂಡಿತು. ಇನ್ನು 4 ವಾರಗಳ ವಿಶ್ರಾಂತಿ ಬಳಿಕ ಅಧಿವೇಶನದ ಎರಡನೇ ಭಾಗವು ಏ.22ರಿಂದ ಆರಂಭವಾಗಲಿದೆ.
ಗದ್ದಲ ನಿಲ್ಲಲೇ ಇಲ್ಲ: ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಶ್ರೀಲಂಕಾ ವಿರುದ್ಧ ಬಲಿಷ್ಠ ನಿರ್ಣಯ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಡಿಎಂಕೆ, ಎಐಎಡಿಎಂಕೆ, ಸಿಪಿಐ ಮತ್ತು ಸಿಪಿಎಂ ಸದಸ್ಯರು ಸದನದ ಬಾವಿಗಿಳಿದು ಭಾರಿ ಪ್ರತಿಭಟನೆ ವ್ಯಕ್ತಪಡಿಸಿದರು.
 ಇದೇ ವೇಳೆ ತೆಲಂಗಾಣ ಹೋರಾಟಗಾರರ ವಿರುದ್ಧ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಕೆಲ ಕಾಂಗ್ರೆಸ್ ಸಂಸದರೂ ಗದ್ದಲವೆಬ್ಬಿಸಿದರು. ಈ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಮುಂದೂಡಲಾಯಿತು.
ರೇಖಾ, ಸಚಿನ್ ಗೈರು: ನಟಿ ರೇಖಾ ಹಾಗೂ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಬಜೆಟ್ ಅಧಿವೇಶನದ ಮೊದಲರ್ಧ ಭಾಗದಲ್ಲಿ ಒಂದೇ ಒಂದು ದಿನವೂ ರಾಜ್ಯಸಭೆಗೆ ಕಾಲಿಟ್ಟಿಲ್ಲ. ರೇಖಾ ಅವರಿಗೆ ಫೆ.21ರಿಂದ ಮಾ 22ರವರೆಗೆ ರಜೆ ನೀಡಲಾಗಿದ್ದರೆ, ಸಚಿನ್‌ಗೆ ಫೆ.21ರಿಂದ ಮಾ.7ರವರೆಗೆ ರಜೆ ನೀಡಲಾಗಿತ್ತು.
 ಇದೇ ವೇಳೆ, 1929ರಲ್ಲಿ ಶಾಸನ ಸಭೆಯ ಮೇಲೆ ಬಾಂಬ್ ಎಸೆದ ಭಗತ್‌ಸಿಂಗ್‌ರ ನೆನಪಿಗಾಗಿ ಸಂಸತ್ ಭವನದಲ್ಲಿ ಅವರ ಸ್ಮಾರಕ ನಿರ್ಮಿಸುವಂತೆ ರಾಜ್ಯಸಭೆಯಲ್ಲಿ ಜೆಡಿಯು ಒತ್ತಾಯಿಸಿತು.

ಸಭಾಧ್ಯಕ್ಷರ ಮೈಕ್ ತುಂಡರಿಸಿ ಆಕ್ರೋಶ
ರಾಜ್ಯಸಭೆಯಲ್ಲೂ ಗುರುವಾರ ಪ್ರತಿಭಟನೆಯ ಕಾವು ಹೆಚ್ಚಿತ್ತು. ಲಂಕಾ ವಿಷಯವಾಗಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಡಿಎಂಕೆ, ಎಐಎಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟುಮಾಡಿದರು. ಅಲ್ಲದೆ, ಕೆಲ ಸಂಸದರು ಸಭಾಧ್ಯಕ್ಷರ ಕುರ್ಚಿ ಬಳಿ ತೆರಳಿ ಮೈಕ್‌ಗಳನ್ನು ತುಂಡರಿಸಿದ ಘಟನೆಯೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.