ದೇಶ

ದತ್ ಮನವಿ ಸಲ್ಲಿಸಿದರೆ ಪರಿಶೀಲನೆ

ದತ್ ಮನವಿ ಸಲ್ಲಿಸಿದರೆ ಪರಿಶೀಲನೆ
Published On :

ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ  ಸಂಜಯ್ ದತ್ ಕ್ಷಮೆಗೆ ಸಂಬಂಧಿಸಿ ಮನವಿ ಸಲ್ಲಿಸಿದರೆ ಅದನ್ನು ಪರಿಶೀಲಿಸಬಹುದು ಎಂದು ಕೇಂದ್ರ ತಿಳಿಸಿದೆ. ರಾಜ್ಯಪಾಲರಿಗೆ ಕ್ಷಮೆ ನೀಡುವ ಅಧಿಕಾರ ಇದೆ. ಸಂಬಂಧಪಟ್ಟವರು ಮನವಿ ಸಲ್ಲಿಸಿದರಷ್ಟೇ ಅವರು ತಮ್ಮ ಅಧಿಕಾರವನ್ನು ಬಳಸಬಹುದು' ಎಂದು ಕಾನೂನು ಸಚಿವ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಈ ನಡುವೆ, ಸಂಜಯ್ ವಿಚಾರಕ್ಕೆ ಸಂಬಂಧಿಸಿ ಕಾಟ್ಜು ಅವರ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿ ಪರೋಕ್ಷ ಸೂಚನೆ ನೀಡಿದ್ದಾರೆ. ಕಾಟ್ಜು ಅವರು ಸುಪ್ರೀಂನ ಖ್ಯಾತ ನ್ಯಾಯಮೂರ್ತಿ. ಯಾವುದಾದರೂ ಒಂದು ವಿಚಾರದ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸಿದರೆ ಅದರ ಕುರಿತು ಸರ್ಕಾರದ ಒಳಗಿನ ಮತ್ತು ಹೊರಗಿನ ಎಲ್ಲಾ ವ್ಯಕ್ತಿಗಳು ಎಚ್ಚರಿಕೆಯಿಂದ ಆಲಿಸುತ್ತಾರೆ. ಸಂಜಯ್ ಪ್ರಕರಣಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಹಂತದಲ್ಲಿ ಕ್ರಮ ಕೈಗೊಳ್ಳಲಿವೆ ಎಂದು ತಿವಾರಿ ಹೇಳಿದ್ದಾರೆ.

ರಾಜ್ಯಪಾಲರಿಗೆ ಕ್ಷಮಾದಾನಕ್ಕೆ ಮನವಿ ಸಲ್ಲಿಸ್ತೇವೆ
ಸಂಜಯ್‌ದತ್‌ರಿಗೆ ಕ್ಷಮೆ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಹಿರಿಯ ನಟಿ, ಸಂಸದೆ ಜಯಾಬಚ್ಚನ್ ತಿಳಿಸಿದ್ದಾರೆ. 'ಸಂಜಯ್‌ದತ್ ವಿಚಾರದಲ್ಲಿ ನಾನು ಎಲ್ಲರ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ. ಸಂಜಯ್‌ದತ್ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರೀಗ ಬದಲಾಗಿದ್ದಾರೆ. ಅವರಿಗೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯ ಇಲ್ಲ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಕ್ಷಮೆ ನೀಡುವಂತೆ ವೈಯಕ್ತಿಕವಾಗಿ ಮನವಿ ಸಲ್ಲಿಸುತ್ತೇವೆ' ಎಂದು ಜಯಾ ಬಚ್ಚನ್ ತಿಳಿಸಿದ್ದಾರೆ.

ತುಂಬಾ ನೋವಾಗಿದೆ: ರಜನಿಕಾಂತ್
ಸಂಜಯ್‌ದತ್‌ರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್ ತೀರ್ಪಿನಿಂದ ತಾವು ವ್ಯಾಕುಲಗೊಂಡಿರುವುದಾಗಿ ಸೂಪರ್‌ಸ್ಟಾರ್ ರಜನಿಕಾಂತ್ ತಿಳಿಸಿದ್ದಾರೆ. 'ನನ್ನ ಗೆಳೆಯ ಹಾಗೂ ಉತ್ತಮ ವ್ಯಕ್ತಿ ಆಗಿರುವ ದತ್‌ರಿಗೆ ಸಂಬಂಧಿಸಿದ ತೀರ್ಪಿನಿಂದಾಗಿ ನಾನು ವ್ಯಾಕುಲಗೊಂಡಿದ್ದೇನೆ. ಸದ್ಯ ಅವರಿಗೆ ಸಿಗುತ್ತಿರುವ ಬೆಂಬಲ ಹಾಗೂ ಕ್ಷಮೆಗಾಗಿ ಹೆಚ್ಚುತ್ತಿರುವ ಒತ್ತಡದಿಂದ ಹೊಸ ಭರವಸೆ ಮೂಡಿದೆ. ಇನ್ನಾದರೂ ದತ್ ತಮ್ಮ ಜೀವನವನ್ನು ಶಾಂತಿಯಿಂದ ಕಳೆಯಲು ಅವಕಾಶ ಮಾಡಿಕೊಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ರಜನಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.