ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಪತ್ನಿ ಸಾಧನಾ ಸಿಂಗ್ ಅವರು ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಾಂತಿಲಾಲ್ ಭೂರಿಯಾ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಗೆ 10 ಕೋಟಿ ಪರಿಹಾರ ಕೋರಿ ಮಾನಹಾನಿ ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಪತ್ರಿಕೆಗಳಲ್ಲಿ ಕಾಂಗ್ರೆಸ್ ನೀಡಿರುವ ಜಾಹೀರಾತಿಗೆ ಸಂಬಂಧಿಸಿ ಈ ನೋಟಿಸ್ ಜಾರಿ ಮಾಡಲಾಗಿದೆ. 'ದುರಾಸೆ ಹೊಂದಿರುವ ಕುಟುಂಬವೊಂದು ಇಡೀ ಮಧ್ಯಪ್ರದೇಶವನ್ನೇ ಲೂಟಿ ಮಾಡಿದೆ' ಎಂದು ಜಾಹೀರಾತಲ್ಲಿ ಪ್ರಕಟಿಸಲಾಗಿತ್ತು. ಜತೆಗೆ, ಚೌಹಾಣ್‌ರ ಪತ್ನಿ, ಆಕೆಯ ಮನೆಯವರು ಕೋಟಿಗಟ್ಟಲೆ ಆಸ್ತಿ ಮಾಡುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ಕಳುಹಿಸಿರುವ ಚೌಹಾಣ್, 15 ದಿನಗಳೊಳಗೆ ಜಾಹೀರಾತನ್ನು ಹಿಂಪಡೆಯದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.