

ಜಮ್ಮು: ಪಾಕಿಸ್ತಾನದಿಂದ ಈ ವರ್ಷ 562 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಅದರಲ್ಲೂ ಹಾಲಿ ವರ್ಷದ ಆಗಸ್ಟ್ನಿಂದ ಅಕ್ಟೋಬರ್ವರೆಗೆ ಪರಿಸ್ಥಿತಿ ಗಂಭೀರವಾಗಿಯೇ ಇತ್ತು. ಈ ಅವಧಿಯಲ್ಲಿ ಶೆಲ್ ಮತ್ತು ಮೋರ್ಟರ್ ದಾಳಿ. ಜನ ವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು. ಇದು ಹನ್ನೊಂದು ವರ್ಷಗಳಲ್ಲೇ ಅಧಿಕ.
ಸೇನೆಯ ಉತ್ತರ ಕಮಾಂಡ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಎಸ್.ಡಿ. ಗೋಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ಈ ಪ್ರಕರಣಗಳು ನಡೆದಿವೆ. ಇದರಿಂದಾಗಿ 150 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
32 ಸಾವಿರ ಮಂದಿಗೆ ಅನಾನುಕೂಲ
ಪಾಕಿಸ್ತಾನದ ದುಃಸ್ಸಾಹಸಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದಾರೆ. ಕದನ ವಿರಾಮ ಉಲ್ಲಂಘನೆಯ ಮರುಕಳಿಕೆಯಿಂದ 32 ಸಾವಿರ ಮಂದಿಗೆ ತೊಂದರೆಯಾಗಿದೆ. ಗಡಿ ಪ್ರದೇಶದ ಸಮೀಪ ವಾಸಿಸುತ್ತಿದ್ದವರೆಲ್ಲ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅವರೆಲ್ಲ ಸೇನಾ ಪಡೆ ನಿರ್ಮಿಸಿದ ತಾತ್ಕಾಲಿಕ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
102 ಉಗ್ರ ಸಂಹಾರ
ಇದರ ಜತೆಗೆ ಕಣಿವೆ ರಾಜ್ಯದಲ್ಲಿ ಬರೋಬ್ಬರಿ 102 ಉಗ್ರರನ್ನು ಕೊಲ್ಲಲಾಗಿದೆ. 47 ಮಂದಿ ತಪ್ಪಿಸಿಕೊಂಡರೆ, ಒಬ್ಬ ಶರಣಾಗಿದ್ದಾನೆ ಎಂದು ರಕ್ಷಣಾ ಪಿಆರ್ಒ ಕರ್ನಲ್ ಎಸ್.ಡಿ. ಗೋಸ್ವಾಮಿ ತಿಳಿಸಿದ್ದಾರೆ. ಇದೇ ವೇಳೆ ಕಾರ್ಯಾಚರಣೆ ವೇಳೆ 29 ಯೋಧರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.