

ಚೆನ್ನೈ: ಚೆನ್ನೈಯಲ್ಲಿರುವ ಅಂಪ ಸ್ಕೈವಾಕ್ ಮಾಲ್‌ಗೆ ಶುಕ್ರವಾರ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮಾಲ್ ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಎಲ್ಲಾ ಗ್ರಾಹಕರನ್ನು ಮತ್ತು ಮಾಲ್‌ನ ಸಿಬ್ಬಂದಿಯನ್ನು ಮಾಲ್‌ನಿಂದ ಹೊರಗೆ ಕಳುಹಿಸಿ ತೀವ್ರ ಶೋಧ ನಡೆಸಿದರು. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಸದ್ಯ ಮಾಲ್ ಬಂದ್ ಮಾಡಲಾಗಿದ್ದು, ಮಧ್ಯಾಹ್ನ ನಾಲ್ಕು ಗಂಟೆಯ ನಂತರ ಪುನಾ ಆರಂಭವಾಗುವ ಸಾಧ್ಯತೆ ಇದೆ.
ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊರ್ವ ದೂರವಾಣಿ ಕರೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಸ್ಪೆನ್ಸಾರ್ ಮಾಲ್‌ಗೂ ಬೆದರಿಕೆ ಕರೆ ಬಂದಿದ್ದು, ಅದನ್ನು ಸಹ ಬಂದ್ ಮಾಡಲಾಗಿದೆ.