

ನವದೆಹಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ಮುಲಾಯಂ ಸಿಂಗ್ 75 ಹುಟ್ಟುಹಬ್ಬದ ಆಚರಣೆ ಕುರಿತಂತೆ ಹೇಳಿಕೆಯೊಂದನ್ನು ನೀಡಿ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ನ.22 ರಂದು ಮುಲಾಯಂ ಅವರ 75ನೇ ಹುಟ್ಟುಹಬ್ಬ ಇದ್ದು, ಆಚರಣೆಯನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ಮುಲಾಯಂ ಅವರ ತವರೂರಾದ ರಾಂಪುರವನ್ನು ಅಲಂಕೃತಗೊಳಿಸಲಾಗಿದೆ. ಈಗಾಗಲೇ ಊರಿನಾದ್ಯಂತ ದೊಡ್ಡ ದೊಡ್ಡ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಹಾಕಲಾಗಿದೆ.
ಕೇವಲ ಹುಟ್ಟುಹಬ್ಬಕ್ಕಾಗಿ ಸರ್ಕಾರಿ ಹಣವನ್ನು ಈ ರೀತಿ ಪೋಲು ಮಾಡುವುದು ಸರಿಯೇ ಎಂಬ ಬಿಜೆಪಿ ಅವರ ಪ್ರಶ್ನೆಗೆ ಉತ್ತರಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರು ಹುಟ್ಟುಹಬ್ಬದ ಆಚರಣೆಗೆ ಬಳಿಸಿರುವ ಹಣ ಸರ್ಕಾರಿ ಹಣವಲ್ಲ, ದಾವುದ್ ಹಾಗೂ ತಾಲಿಬಾನ್ ಅವರೇ ಈ ಎಲ್ಲಾ ಖರ್ಚುವೆಚ್ಚಗಳಿಗೆ ಹಣ ಕೊಟ್ಟಿರುವುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಟ್ಟುಹಬ್ಬದ ಆಚರಣೆಗೆ ಸರ್ಕಾರಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಶಾಲೆಗಳಲ್ಲಿ ಮಕ್ಕಳಿಗೆ ನೀರಿಲ್ಲ, ಆದರೆ ಈ ಬಗ್ಗೆ ಅವರು ಆಲೋಚನೆ ಮಾಡುವುದಿಲ್ಲ. ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕ ವಿಜಯ್ ಬಹದೂರ್ ಪತಕ್ ಆರೋಪಿಸಿದ್ದಾರೆ.
ಮುಲಾಯಂ ಯಾದವ್ ಅವರು ಅದ್ದೂರಿಯಾಗಿ ಅಲಂಕೃತಗೊಂಡ ಸಾರೋಟಿನಲ್ಲಿ ಇಂದು ಮಧ್ಯಾಹ್ನ ರಾಂಪುರದಲ್ಲಿ ಆಗಮಿಸಿದ್ದು, ಹುಟ್ಟುಹಬ್ಬದ ಆಚರಣೆ ಎರಡು ದಿನಗಳ ಕಾಲ ನಡೆಯಲಿದೆ.
ರಾಂಪುರದಲ್ಲಿ ಈಗಾಗಲೇ 75 ಅಡಿಯ ಕೇಕ್ ಒಂದನ್ನು ತಯಾರು ಮಾಡಲಾಗಿದೆ. ಊರಿನಾದ್ಯಂತ ಕೆಂಪು ಹಾಗೂ ಬಿಳಿಯ ಬಣ್ಣದ ಬಲೂನ್‌ಗಳಲ್ಲಿ ಅಲಂಕೃತಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಹಿರಿಯ ನಾಯಕ ಅಜಂ ಖಾನ್ ಸೇರಿದಂತೆ ಇತರೆ ಪ್ರಮುಖ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.