

ನವದೆಹಲಿ: ಸ್ವಯಂ ಘೋಷಿತ ದೇವಮಾನವ ಅಸಾರಾಬಾಪುಗೆ ಮತ್ತೆ ಹಿನ್ನಡೆಯಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ನೀಡುವಂತೆ ಅಸಾರಾಂ ಬಾಪು ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆ ನಡೆಸಿ ಅಸಾರಾಂ ಬಾಪುವಿನ ವೈದ್ಯಕೀಯ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸುವುದಾಗಿ ಸ್ವಷ್ಟಪಡಿಸಿದೆ. 'ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಅಸಾರಾಂ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲೇ ತಾವು ಜಾಮೀನು ಅರ್ಜಿಯ ವಿಚಾರಣೆ ನಡೆಸುವುದಿಲ್ಲ' ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ವೈದ್ಯಕೀಯ ಪರೀಕ್ಷೆ ಕುರಿತು ದೆಹಲಿಯ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಡಿಸೆಂಬರ್ 3ರೊಳಗೆ ಅಸಾರಾಂ ವೈದ್ಯಕೀಯ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಿದೆ. ಅಂತೆಯೇ ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ ಅದನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.
ಅಂತೆಯೇ ಈ ಬಗ್ಗೆ ರಾಜಸ್ತಾನ ಸರ್ಕಾರಕ್ಕೂ ನಿರ್ದೇಶನ ನೀಡಿರುವ ನ್ಯಾಯಾಲಯ, ರಾಜಸ್ತಾನದ ವೈದ್ಯಕೀಯ ಇಲಾಖೆ ಅಸಾರಾಂ ವೈದ್ಯಕೀಯ ಪರೀಕ್ಷೆ ನಡೆಸುತ್ತಿರುವ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಅಸಾರಾಂ ಕುರಿತ ಎಲ್ಲ ರೀತಿಯ ವೈದ್ಯಕೀಯ ಮಾಹಿತಿಗಳನ್ನು ನೀಡುವಂತೆ ಸೂಚಿಸಿದೆ.
ಜೋಧ್‌ಪುರದಲ್ಲಿರುವ ಆಶ್ರಮದಲ್ಲಿ ಮಹಿಳಾ ಭಕ್ತರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ವಿವಾದಿತ ದೇವಮಾನವ ಅಸಾರಾಂಬಾಪುವನ್ನು ಇಂದೋರ್ ಆಶ್ರಮದಲ್ಲಿ ಕಳೆದ 2013 ಸೆಪ್ಟೆಂಬರ್ 1ರಂದು ಜೋಧ್‌ಪುರ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಅಸಾರಾಂ ಮಗ ನಾರಾಯಣ ಪ್ರೇಮ ಸಾಯಿಯನ್ನು ಕೂಡ ನಂತರದ ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು.