ಜಯಾ ಸಲಕರಣೆಗಳನ್ನು ಮುಟ್ಟದಿರಲು ಸೆಲ್ವಂ ನಿರ್ಧಾರ

ತಮಿಳುನಾಡಿನ ನೂತನ ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಅವರು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಬಳಸುತ್ತಿದ್ದ ಯಾವುದೇ ವಸ್ತುಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ.
Updated on: 

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಅವರು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಬಳಸುತ್ತಿದ್ದ ಯಾವುದೇ ವಸ್ತುಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿರುವ ಪನ್ನೀರ್ ಸೆಲ್ವಂ ಅವರು, ತಮ್ಮನ್ನು ಮುಖ್ಯಮಂತ್ರಿ ಎಂದು ಕರೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಯಾವುದೇ ವಸ್ತುಗಳನ್ನು ತಾವು ಬಳಸದಂತೆ ತಮ್ಮ ಮೇಲೆ ತಾವೇ ನಿರ್ಬಂಧ ಹೇರಿಕೊಂಡಿದ್ದಾರೆ.

ಇದಕ್ಕಾಗಿ ಚೆನ್ನೈನ ಸೆಂಟ್‌ಜಾರ್ಜ್‌ನಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಬೀಗ ಜಡಿಯುವಂತೆ ಅಧಿಕಾರಿಗಳಿಗೆ ಸೆಲ್ವಂ ಅವರು ಸೂಚನೆ ನೀಡಿದ್ದಾರೆ. ಕಟ್ಟಡದ 2ನೇ ಮಹಡಿಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಇದ್ದು, ಅಲ್ಲಿಗೆ ತೆರಳದಿರಲು ಸೆಲ್ವಂ ಅವರು ನಿರ್ಧರಿಸಿದ್ದಾರೆ. ಮೊದಲ ಮಹಡಿಯಲ್ಲಿರುವ ಹಣಕಾಸು ಕಚೇರಿಯಲ್ಲಿಯೇ ವಾಸ್ತವ್ಯ ಹೂಡಲು  ಸೆಲ್ವಂ ಅವರು ನಿರ್ಧರಿಸಿದ್ದು, ಹೀಗಾಗಿಯೇ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಚೇರಿಗೆ ಬೀಗ ಹಾಕುವಂತೆ ಅವರು ಸೂಚನೆ ನೀಡಿದ್ದಾರೆ.

ಇನ್ನು ತಾವು ಮುಖ್ಯಮಂತ್ರಿಯಾಗಿದ್ದರೂ ತಮ್ಮನ್ನು ಯಾರೂ ಕೂಡ ಮುಖ್ಯಮಂತ್ರಿ ಎಂದು ಕರೆಯದಂತೆ ಸೂಚಿಸಿರುವ ಸೆಲ್ವಂ ಅವರು, ತಮ್ಮ ಮನೆ ಮುಂದೆ ಮುಖ್ಯಮಂತ್ರಿ ಎಂದು ಬೋರ್ಡ್ ಬರೆಯಲು ಬಂದ ಕಾರ್ಮಿಕರನ್ನು ಕೂಡ ತಡೆದು ಬೋರ್ಡ್ ಬರೆಯದಂತೆ ಸೂಚಿಸಿದ್ದಾರೆ. ಇವಿಷ್ಟೇ ಅಲ್ಲದೆ ಕಚೇರಿಯಲ್ಲಿನ ಬೋರ್ಡ್‌ಗಳನ್ನು ಕೂಡ ಬದಲಿಸದಂತೆ ನಿರ್ಬಂಧ ಹೇರಿದ್ದಾರೆ.

ಇನ್ನು ಸೆಂಟ್‌ಜಾರ್ಜ್ ಮುಖ್ಯಮಂತ್ರಿ ಕಚೇರಿಗೆ ಜಯಲಲಿತಾ ಅವರು ತೆರಳುತ್ತಿದ್ದ ಮಾರ್ಗದಲ್ಲಿ ಮತ್ತು ಜಯಾ ಅವರು ಕಚೇರಿ ಪ್ರವೇಶ ಮಾಡುತ್ತಿದ್ದ ಮಾರ್ಗದಲ್ಲಿ ತಮ್ಮ ಕಾರನ್ನು ನಿಲ್ಲಿಸದಂತೆ ಕಾರಿನ ಚಾಲಕನಿಗೆ ಮತ್ತು ಅಧಿಕಾರಿಗಳಿಗೆ ಹೇಳಿದ್ದಾರೆ. ಒಟ್ಟಾರೆ ಪನ್ನೀರ್ ಸೆಲ್ವಂ ಅವರು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ, ಅವರು ಮಾನಸಿಕವಾಗಿ ಜಯಲಲಿತಾ ಅವರನ್ನೇ ತಮ್ಮ ಮುಖ್ಯಮಂತ್ರಿ ಎಂದು ಭಾವಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನದ ಪರಾಕಾಷ್ಟೆಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com