

ಪಣಜಿ: ದೇಶದಲ್ಲಿ ಹಲವು ಭೀಕರ ಬಾಂಬ್ ದಾಳಿಗಳನ್ನು ನಡೆಸಿದ್ದ ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರ ಸಂಘಟನೆ ಪರ ಮಾತನಾಡಿರುವ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖುರ್ಷಿದ್ ಅಹ್ಮದ್ ಸಯ್ಯದ್, ಐಎಂ ಧರ್ಮಾಭಿಮಾನಿ ಸಂಘಟನೆಯೇ ಹೊರತು ಉಗ್ರ ಸಂಘಟನೆಯಲ್ಲ ಎಂದು ಹೇಳಿದ್ದಾರೆ.
ಗೋವಾ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಯ್ಯದ್, ಜಗತ್ತಿನ ಬೇರೆ ಭಾಗದಲ್ಲಿ ಮುಸ್ಲಿಂರು ಉಗ್ರರು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆದರೆ ಭಾರತದಲ್ಲಿರುವ ಐಎಂ ಸಂಘಟನೆಯ ಸದಸ್ಯರು ಭಯೋತ್ಪಾದಕರಲ್ಲ. ಭಾರತೀಯ ಮೂಲದ ಮುಸ್ಲಿಂರು ಯಾವತ್ತೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪುಣೆ (2010), ವಾರಣಾಸಿ (2010), ಮುಂಬೈ ಸರಣಿ ಸ್ಫೋಟ (2011) ಸೇರಿದಂತೆ ಸುಮಾರು ಹತ್ತು ದಾಳಿಗಳನ್ನು ನಡೆಸಿದೆ ಎಂಬ ಪ್ರಶ್ನೆಯನ್ನು ಸುದ್ದಿಗಾರರು ಎತ್ತಿದ್ದಾಗ ಸೈಯದ್, ಬಹುಶ: ಆ ದಾಳಿಗಳನ್ನು ಬೇರೆ ಸಂಘಟನೆಗಳು ಮಾಡಿರಬೇಕು. ಆದರೆ ಐಎಂ ಬಗ್ಗೆ ಅರ್ಥವಿಲ್ಲದೆ ಮಾತನಾಡುತ್ತಾರೆ. ಹಾಗಂತ ಅದರರ್ಥ ಅವರು ಭಯೋತ್ಪಾದಕರು ಎಂದಲ್ಲ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2010ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಯುಪಿಎ ಸರ್ಕಾರ ಕೂಡಾ ಇಂತಹ ಪಂಥಾಭಿಮಾನಿ ಸಂಘಟನೆ ವಿರುದ್ಧ ಕ್ರಮ ಕೈಗೊಂಡಿತ್ತು ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಸೈಯದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಭಾರತ ಮತ್ತು ಅಮೆರಿಕ ಸರ್ಕಾರ ಅಧಿಕೃತವಾಗಿಯೇ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು.