

ನವದೆಹಲಿ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಜತೆಗೆ ಔಷಧಗಳನ್ನು ಮತ್ತು ಅಗತ್ಯ ಬಿದ್ದರೆ ಕೈಗೊಳ್ಳಬಹುದಾಗ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ನಡೆಸಬೇಕು ಎಂದು ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆ ನಡೆಸಬೇಕೆಂದು ಸೂಚಿಸಿದೆ.
ಈ ಬಗ್ಗೆ ಭಾರತೀಯ ವೈದ್ಯ ಮಂಡಳಿ (ಎಂಸಿಐ) ಕೂಡ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಬೇಕೆಂದು ನ್ಯಾ.ಮದನ್ ಬಿ.ಲೋಕುರ್ ಮತ್ತು ನ್ಯಾ.ಯು. ಯು.ಲಲಿತ್ ಅವರನ್ನೊಳ ಗೊಂಡ ಪೀಠ ಆದೇಶ ನೀಡಿದೆ.
2006ರಲ್ಲಿ ಆ್ಯಸಿಡ್ ದಾಳಿ ಗೊಳಗಾಗಿದ್ದ ಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಸುಪ್ರೀಂ ಈ ರೀತಿ ತಿಳಿಸಿದೆ. ಅಲ್ಲದೇ, ಸಂತ್ರಸ್ತರು ಆಸ್ಪತ್ರೆಗೆ ಬಂದೊಡನೆ ಅವರಿಗೆ ಆ್ಯಸಿಡ್ ದಾಳಿಗೊಳಗಾದವರು ಎಂದು ಪ್ರಮಾಣ ಪತ್ರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.