

ನವದೆಹಲಿ: ಬಹುಕೋಟಿ ಹಗರಣ ಆದರ್ಶ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಸೋಮವಾರ ಸುಪ್ರೀಂ ಮೆಟ್ಟಿಲೇರಿದ್ದಾರೆ.
ಅಶೋಕ್ ಚವಾಣ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿರುವ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದ್ದು, ಏಪ್ರಿಲ್ 24ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ ಅಲ್ಲದೆ, ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದಲ್ಲಿ ತಾವು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲದ ಕಾರಣ ಹಗರಣದಲ್ಲಿರುವ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಅರ್ಜಿಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡಿದ್ದ ಮುಂಬೈ ಹೈಕೋರ್ಟ್ ಮಾ.4 ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಏನಿದು ಪ್ರಕರಣ...?
ಕಾರ್ಗಿಲ್ ಸಮರದ ಮೃತ ಪಟ್ಟ ಯೋಧರ ಪತ್ನಿಯರಿಗೆ ಮನೆ ನೀಡುವ ಸಲುವಾಗಿ ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿದ್ದ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ. ಇದನ್ನು ರಾಜಕಾರಣಿಗಳು, ಅವರ ಸಂಬಂಧಿಕರು ಹಾಗೂ ನಿವೃತ್ತ ಸೇನಾಧಿಕಾರಿಗಳಿಗೆ ನೀಡಲಾಗಿತ್ತು.
2010ರಲ್ಲಿ ಹಗರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಅಂದಿನ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಸಿಬಿಐ ತನಿಖೆಯ ವೇಳೆ ಹಗರಣದಲ್ಲಿ ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ಅವರು ಮೃತ ಯೋಧರ ಪತ್ನಿಯಂದಿರಿಗೆ ನಿರ್ಮಾಣ ಮಾಡಲಾಗಿದ್ದ ಕೆಲವು ಫ್ಲ್ಯಾಟ್‌ಗಳನ್ನು ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ನೀಡಿರುವುದಾಗಿ ತಿಳಿದುಬಂದಿತ್ತು. ಹಗರಣದಲ್ಲಿ ಅಶೋಕ್ ಚೌಹಾಣ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಚೌಹಾಣ್ ಅವರು ರಾಜಿನಾಮೆ ನೀಡುವ ಮೂಲಕ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ತೊರೆದಿದ್ದರು.