

ಕೋಲ್ಕತ್ತಾ: ಪಶ್ಟಿಮ ಬಂಗಾಲದ ಅನೇಕ ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಕ್ಕೆ ಶನಿವಾರ ಮತ್ತೆ 7 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಸಾವಿನ ಸಂಖ್ಯೆ 40ಕ್ಕೆ ಏರಿದೆ. ಪುರ್ಬಾ ಮೇದಿನೀಪುರ್, ಪಶ್ಚಿಮ್ ಮೇದಿನೀಪುರ್, ನದಿಯಾ, ಹೌರಾ ಮತ್ತು ಕೋಲ್ಕತ್ತಾ ಜಿಲ್ಲೆಗಳು ಮಳೆಯ ಪ್ರವಾಹಕ್ಕೆ ಹೆಚ್ಚು ಹಾನಿಗೀಡಾಗಿವೆ.
ಎಲ್ಲೆಲ್ಲ ಮಳೆ ಅವ್ಯಾಹತವಾಗಿ ಬಿದ್ದಿದೆಯೋ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗುತ್ತಿದೆ. ಸುಮಾರು 150 ನಿರಾಶ್ರಿತ ತಾಣಗಳನ್ನು ಸ್ಥಾಪಿಸಲಾಗಿದೆ. ಇದುವರೆಗೆ ಮಳೆಗೆ ಸುಮಾರು 2 ಲಕ್ಷ ಮಂದಿ ಮಳೆಯ ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. 1.8 ಲಕ್ಷ ಮನೆಗಳು ಹಾನಿಗೀಡಾಗಿವೆ. 1.9 ಲಕ್ಷ ಮಂದಿಯನ್ನು ನಿರಾಶ್ರಿತ ಶಿಬಿರಗಳಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ರಾಜಧಾನಿ ಕೋಲ್ಕತ್ತಾದ ಅನೇಕ ಭಾಗಗಳಲ್ಲಿ ಮಳೆಯಿಂದಾಗಿ ರಸ್ತೆ ಮತ್ತು ರೈಲು ಮಾರ್ಗಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಕೊಮೆನ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಇಷ್ಟೊಂದು ಮಳೆ ಬೀಳುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶ್ಶಾ ರಾಜ್ಯದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ.