

ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ನಿಧನ ಹಿನ್ನೆಲೆಯಲ್ಲಿ ಅಂತಿಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿದ್ದು, ಪ್ರಣಬ್ ಮುಖರ್ಜಿಯವರನ್ನು ಬುಧವಾರ ಭೇಟಿಯಾಗಿದ್ದಾರೆ.
ಭಾರತಕ್ಕೆಆಗಮಿಸಿರುವ ಶೇಖ್ ಹಸೀನಾ ಅವರು, ನೇರವಾಗಿ ರಾಷ್ಟ್ರಪತಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಣಬ್ ಮುಖರ್ಜಿ ಹಾಗೂ ಅವರ ಮಗನನ್ನು ಭೇಟಿ ಮಾಡಿದ್ದು, ಸುವ್ರಾ ಮುಖರ್ಜಿಯವರ ಅಂತಿಮ ದರ್ಶನವನ್ನು ಪಡೆದು ಗೌರವ ಸಲ್ಲಿಸಿದ್ದಾರೆ. ಸುವ್ರಾ ಅಂತ್ಯಕ್ರಿಯೆ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಲಿರುವ ಶೇಖ್ ಹಸೀನಾ ಅವರು ಪ್ರಧಾನಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ಮತ್ತು ಅವರ ತಂಗಿ ರೆಹನಾ ಪ್ರಣಬ್ ಮುಖರ್ಜಿಯವರ ಕುಟುಂಬದೊಂದಿಗೆ ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದು, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಮಜೀಬುರ್ ರೆಹಮಾನ್ ಅವರ ಹತ್ಯೆಯಾದ ಬಳಿಕ ಹಸೀನಾ ಮತ್ತು ಅವರ ಕುಟುಂಬ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿತ್ತು. ಈ ವೇಳೆಯಲ್ಲಿ ಶೇಖ್ ಹಸೀನಾ ಹಾಗೂ ಪ್ರಣಬ್ ಪತ್ನಿ ಸುವ್ರಾ ಅವರೊಂದಿಗೆ ಗಾಢ ಸ್ನೇಹ ಬೆಳೆದಿತ್ತು. ಅನಾರೋಗ್ಯದಿಂದಾಗಿ ಸುವ್ರಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಕರೆ ಮಾಡಿ ಅವರ ಆರೋಗ್ಯ ಕ್ಷೇಮಾ ಕುರಿತಂತೆ ಸಮಾಚಾರ ವಿಚಾರಸಿದ್ದರು. ಇದೀಗ ಸುವ್ರಾ ಅವರ ನಿಧನ ಹಿನ್ನೆಲೆಯಲ್ಲಿ ಸಹೋದರಿ ರೆಹನಾ, ಪುತ್ರಿ ಸಾಯಿಮಾ ವಾಜಿದ್, ವಿದೇಶಾಂಗ ಸಚಿವ ಎ.ಎಚ್.ಮೊಹಮದ್ ಅಲಿ ಅವರೊಂದಿಗೆ ದೆಹಲಿಗೆ ಆಗಮಿಸಿರುವ ಶೇಖ್ ಹಸೀನಾ ಅವರು ಅಂತ್ಯಕ್ರಿಯೆ ಮುಗಿದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಸ್ವದೇಶಕ್ಕೆ ಮರಳಲಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ (74) ಅವರನ್ನು ಅ.7ರಂದು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿನಕಳೆಯುತ್ತಿದ್ದಂತೆ ಸುವ್ರಾ ಅವರ ಅವರ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.