

ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯನ್ನು ಸೋಮವಾರ ಯಾರೋ ಹ್ಯಾಕ್ ಮಾಡಿದ್ದಾರೆ. ಹಾಗಂತ ಸ್ವತಹ ಅಮಿತಾಬ್ ಬಚ್ಚನ್ ಅವರೇ ಹೇಳಿಕೊಂಡಿದ್ದಾರೆ.
ಅವರು ಟ್ವಿಟ್ಟರ್ ನಲ್ಲಿ 984 ಖಾತೆಗಳನ್ನು ಅನುಸರಿಸುತ್ತಿದ್ದಾರೆ.ಇಂದು ಬೆಳಗ್ಗೆ ತಮ್ಮ ಖಾತೆಯನ್ನು ತೆರೆದು ನೋಡಿದಾಗ ಅದರಲ್ಲಿ ಸೆಕ್ಸ್ ಸೈಟ್ ನ್ನು ಪಾಲೋ ಮಾಡುತ್ತಿರುವುದಾಗಿ ಕಂಡುಬಂತು.
ಕೂಡಲೇ ಜಾಗೃತರಾದ ಬಚ್ಚನ್, ಅದನ್ನು ಕಿತ್ತು ಹಾಕಿ ತಮ್ಮ ಅಭಿಮಾನಿಗಳಿಗೆ, ''ನನ್ನ ಟ್ವಿಟ್ಟರ್ ನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಸೆಕ್ಸ್ ಸೈಟ್ ನ್ನು ಫಾಲೋ ಮಾಡುತ್ತಿರುವುದಾಗಿ ತೋರಿಸುತ್ತಿದೆ. ಈ ರೀತಿಯ ವರ್ತನೆಯನ್ನು ನನ್ನ ಬಳಿ ತೋರಿಸಬೇಡಿ. ನನಗೆ ಇದರ ಅವಶ್ಯಕತೆಯಿಲ್ಲ'' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
72 ವರ್ಷದ ಬಾಲಿವುಡ್ ನ ಅತ್ಯಂತ ಬೇಡಿಕೆಯ ನಟ ಅಮಿತಾಬ್ ಬಚ್ಚನ್ ಗೆ ಟ್ವಿಟ್ಟರ್ ನಲ್ಲಿ 16.5 ದಶಲಕ್ಷ ಮಂದಿ ಅನುಯಾಯಿಗಳಿದ್ದಾರೆ. ಬಾಲಿವುಡ್ ನ ನಟರಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಟ್ವಿಟ್ಟರ್, ಫೇಸ್ ಬುಕ್ ಬಳಸುತ್ತಿರುವವರಲ್ಲಿ ಅಮಿತಾಬ್ ಬಚ್ಚನ್ ಪ್ರಮುಖರು.ಬಿಗ್ ಬಿ ಮೇ 2010ರಿಂದ ಟ್ವಿಟ್ಟರ್ ನ್ನು ಬಳಸುತ್ತಿದ್ದಾರೆ.