

ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೆಚ್.ಎಲ್ ದತ್ತು ನೇತೃತ್ವದ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠ ಈ ತೀರ್ಪು ನೀಡಿದ್ದು, ಒಂದು ವೇಳೆ ರಾಜೀವ್ ಗಾಂಧಿ ಹಂತಕರನ್ನು ತಮಿಳುನಾಡು ಸರ್ಕಾರ ಬಿಡುಗಡೆಗೊಳಿಸಬೆಕಾದರೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ನಡೆಸಿರುವುದರಿಂದ ಕೇಂದ್ರ ಸರ್ಕಾರದೊಂದಿಗೆ ತಮಿಳುನಾಡು ಸರ್ಕಾರ ಚರ್ಚೆ ನಡೆಸಬೇಕಾಗುತ್ತದೆ. ರಾಜೀವ್‌ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕೆಂದು ಹಿರಿಯ ವಕೀಲ ರಾಮ್ ಜೆಠ್ಮಲಾನಿ, ರಾಕೇಶ್ ದ್ವಿವೇದಿ ಹಾಗೂ ವಿ.ಶ್ರೀಧರನ್ ಅವರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ ಅಪರಾಧಿಗಳಾದ ಮುರುಗನ್, ಸಂತನ್, ಅರಿವು ಎಂಬ ಆರೋಪಿಗಳಿಗೆ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಟು ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ನಳಿನಿ, ರಾಬರ್ಟ್‌ಪಿಯೋಸ್, ಜಯಕುಮಾರ್ ಮತ್ತು ರವಿಚಂದ್ರನ್‌ಗೆ ತಮಿಳುನಾಡು ಸರ್ಕಾರ ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡಲು ಮುಂದಾಗಿತ್ತು.