

ಬೆಂಗಳೂರು: ವಾಯುಭಾರ ಕುಸಿತದಿಂದ ಚೆನ್ನೈ ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಬೆಂಗಳೂರು-ಚೆನ್ನೈ ಮಾರ್ಗದ ನಾಲ್ಕು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ಕೆಎಸ್‍ಆರ್‍ಟಿಸಿ ಮಾತ್ರ ಎಂದಿನಂತೆ ಬಸ್ ಸಂಚಾರ ನಡೆಸುತ್ತಿದೆ. ರೈಲುಗಳ ಸಂಚಾರ ರದ್ದಾಗಿದ್ದರಿಂದ ಕಂಗಾಲಾಗಿದ್ದ ಪ್ರಯಾಣಿಕರಿಗೆ ಇದು ಕೊಂಚ ನೆಮ್ಮದಿ ತಂದಿತ್ತು. ಬೆಂಗಳೂರಿನಿಂದ ಚೆನ್ನೈಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರೂ ಚೆನ್ನೈ ನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಕೆಎಸ್‍ಆರ್‍ಟಿಸಿ ಎಂದಿನಂತೆ ತನ್ನ ಕಾರ್ಯನಿರ್ವಹಿಸುತ್ತಿದೆ.
ಪ್ರಯಾಣಿಕರ ಹಿತದೃಷ್ಟಿಯಿಂದ ತಮಿಳುನಾಡು ಬಸ್‍ಗಳು ಕೂಡ ಸಂಚಾರ ಆರಂಭಿಸಿವೆ. ಪ್ರತಿ ನಿತ್ಯ ಬೆಂಗಳೂರಿನ ಶಾಂತಿನಗರ ನಿಲ್ದಾಣ ದಿಂದ ತಮಿಳುನಾಡಿಗೆ ಸುಮಾರು 15-20 ಬಸ್‍ಗಳ ಸಂಚರಿಸುತ್ತಿದ್ದವು. ಆದರೆ, ಬುಧವಾರದಿಂದ ಸುಮಾರು 10ರಿಂದ 15 ಬಸ್‍ಗಳು ಸಂಚಾರ ಆರಂಭಿಸಿವೆ. ಕೆಎಸ್‍ಆರ್‍ಟಿಸಿಯ ಸುಮಾರು 20 ಬಸ್‍ಗಳು ಕೂಡ ಈ ಮಾರ್ಗದಲ್ಲಿ ಸಂಚರಿಸುತ್ತಿವೆ.
ಸುಮಾರು ರು.30 - 35 ಲಕ್ಷ ನಷ್ಟ: ಭಾರಿ ಮಳೆಯಿಂದಾಗಿ ಕೆಎಸ್‍ಆರ್‍ಟಿಸಿ ಸುಮಾರು ರು.30ರಿಂದ 35 ಲಕ್ಷ ನಷ್ಟ ಅನುಭವಿಸಿದೆ. ಪ್ರತಿ ನಿತ್ಯ 42ರಿಂದ 43 ಪಾಳಿಗಳಲ್ಲಿ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ, ಕಳೆದೊಂದು ತಿಂಗಳಿಂದ ಕೇವಲ 25 ಪಾಳಿಗಳಲ್ಲಿ ಬಸ್‍ಗಳು ಸಂಚರಿಸುತ್ತಿವೆ. ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಚಿತ್ತೂರು ಹಾಗೂ ಹೊಸೂರು ಮಾರ್ಗದಲ್ಲಿ ಬಸ್‍ಗಳು ಸಂಚಾರ ಆರಂಬಿsಸುತ್ತಿವೆ ಎಂದು ರಾಜ್ಯ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.