

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿರುವ ಏಳು ಆಸ್ತಿಗಳನ್ನು ಹರಾಜು ಹಾಕಲಾಗಿದೆ. ಅದರಲ್ಲಿ ಒಂದನ್ನು ಹರಾಜು ಕೂಗುತ್ತಿರುವ ಪತ್ರಕರ್ತ ಎಸ್.ಬಾಲಕೃಷ್ಣ ಅವರಿಗೆ ದಾವೂದ್ ಬಂಟ ಛೋಟಾ ಶಕೀಲ್‌ನಿಂದ ಬೆದರಿಕೆ ಬಂದಿದೆ.
'ದಾವೂದ್ ಇಬ್ರಾಹಿಂ ಆಸ್ತಿ ಹರಾಜಿನಲ್ಲಿ ನೀನು ಪಾಲ್ಗೊಳ್ಳುತ್ತಿರುವೆ. ನಿನಗೆ ಏನಾಗಿದೆ? ಎಲ್ಲವೂ ಸರಿ ಇದೆ ಎಂದು ಕೊಳ್ಳುತ್ತೇನೆ,'ನೀನು ಮಾಡುತ್ತಿರುವ ಕೆಲಸವನ್ನು ಕೈ ಬಿಡು ಎಂಬ ಸಂದೇಶ ಬಂದಿರುವುದಾಗಿ ಬಾಲಕೃಷ್ಣ ತಿಳಿಸಿದ್ದಾರೆ.
'ಮಕ್ಕಳ ಕಲ್ಯಾಣ ಹಾಗೂ ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒ ದೇಶ್ ಸೇವಾ ಸಮಿತಿ ಪರವಾಗಿ ಹರಾಜು ಕೂಗಲಾಗುತ್ತಿದೆ. ಈ ಸ್ಥಳದಲ್ಲಿ ಇಂಗ್ಲಿಷ್ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಈ ಸಂಸ್ಥೆಗೆ ರಾಷ್ಟ್ರಪ್ರೇಮಿ ಅಶ್ಫಾಖುಲ್ಲಾ ಖಾನ್ ಹೆಸರಿಡಲಿದ್ದೇವೆ' ಎಂದಿರುವ ಬಾಲಕೃಷ್ಣ, 'ಪಾಕಿಸ್ತಾನದಲ್ಲಿ ಕುಳಿತ ವ್ಯಕ್ತಿ ನಮ್ಮ ದೇಶದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಬಾರದು,' ಎಂದಿದ್ದಾರೆ.
ಇನ್ನೂ ಪೊಲೀಸರಿಗೆ ಮಾಹಿತಿ ನೀಡದ ಬಾಲಕೃಷ್ಣ, 'ಆಸ್ತಿ ಬೆಲೆ 1.18 ಕೋಟಿ ರೂ.ಆಗಿದ್ದು, ನಿಧಿ ಸಂಗ್ರಹದಿಂದ ಸ್ವಲ್ಪ ಹಣ ಸಂಗ್ರಹವಾಗಿದೆ. ಉಳಿದ ಮೊತ್ತವನ್ನು ಸರಿದೂಗಿಸಲು ಯತ್ನಿಸಲಾಗುತ್ತಿದೆ,' ಎಂದು ಹೇಳಿದ್ದಾರೆ. ದಾವೂದ್ ಇಬ್ರಾಹಿಂ ವಾಸಸ್ಥಾನವಾಗಿದ್ದ ಈ ಆಸ್ತಿ ದಕ್ಷಿಣ ಮುಂಬೈಯಲ್ಲಿದ್ದು, ಕಾಲೋಬಾದಲ್ಲಿರುವ ಹೊಟೇಲ್ ಡಿಪ್ಲೋಮಾಟ್‌ನಲ್ಲಿ ಡಿ.9ರಂದು ಆಸ್ತಿಯ ಹರಾಜು ಹಾಕಲಾಗುತ್ತದೆ.