

ವಾರಣಾಸಿ: ಭಾರತದ ಪ್ರವಾಸದಲ್ಲಿರುವ ಜಪಾನ್ ಪ್ರಧಾನ ಮಂತ್ರಿ ಶಿಸ್ನೋ ಅಬೆ ಅವರನ್ನು ವಾರಣಾಸಿಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಮಕ್ಕೆ ಸ್ವಾಗತಿಸಲು ವಿಶ್ವವಿಖ್ಯಾತ ಶೆಹನಾಯಿ ವಾದಕ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಪುತ್ರ ಸಂಗೀತ ಗೋಷ್ಠಿ ನಡೆಸಲಿದ್ದಾರೆ.
ಗಣ್ಯರ ಸ್ವಾಗತಕ್ಕೆ ಜಾಮಿನ್ ಹುಸೇನ್ ಖಾನ್ ಅವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾದೇಸಾರ್ ನ ತಾಜ್ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಪ್ರದರ್ಶನ ನೀಡಲಿದ್ದಾರೆ.
ಪವಿತ್ರ ಗಂಗಾ ನದಿಯ ತಟದ ದಶ್ವಾಸಮೇಧ ಘಾಟ್ ನಲ್ಲಿ ಅಬೆ ಅವರನ್ನು ಸಾಂಪ್ರದಾಯಕವಾಗಿ ಸ್ವಾಗತಿಸಲಿದ್ದು, ಅವರು ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಗಣ್ಯರ ಭೇಟಿಯಿಂದಾಗಿ ವಾರಣಾಸಿ ದೇವಸ್ಥಾನವನ್ನು ಕೋಟೆಯಂತೆ ಸುತ್ತುವರೆಯಲಾಗಿದೆ. ಒಳಹೋಗುವ, ಹೊರಬರುವ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದ್ದು, ನರೇಂದ್ರ ಮೋದಿ ಮತ್ತು ಅಬೆ ಆಗಮಿಸಲಿರುವ ಮಾರ್ಗವನ್ನು ತಪಾಸಣೆಗೆ ಒಳಪಡಿಸಿದ್ದು, ಸಾಮಾನ್ಯರಿಗೆ ಪ್ರವೇಶ ನಿರಾಕರಿಸಲಾಗಿದೆ.
ಮೋದಿ ಮತ್ತು ಅಬೆ ಅವರನ್ನು ಸ್ವಾಗತಿಸುವ ಬ್ಯಾನರ್ ಗಳು ಮತ್ತು ಭಿತ್ತಿಚಿತ್ರಗಳನ್ನು ರಸ್ತೆಯುದ್ದಕ್ಕೂ ಹಾಕಲಾಗಿದೆ. ಮೋದಿಯವರು ವಾರಣಾಸಿಯ ಲೋಕಸಭಾ ಸಂಸದ ಕೂಡ. ಎಲ್ಲವೂ ಶಾಂತಿಯುತವಾಗಿ ಜರುಗಲು ಅತ್ಯುತ್ತಮ ಭದ್ರತಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.